ಅಪ್ಪನ ಗೆಲುವು !!

ಅಪ್ಪನ ಗೆಲುವು !!


ಮಗಳ ಬೆರಳನು ಹಿಡಿದು ನಡೆಸುವಾಗ

ಅಪ್ಪನ ಕೈಬಿಟ್ಟ ಮಗಳು ಬೀಳದೇ ನಡೆದು

ಅಪ್ಪನೆಡೆಗೆ ನೋಡಿ ಕಿಲಕಿಲ ನಕ್ಕಾಗ

ಅದು ಅಪ್ಪನ ಮೊದಲ ಗೆಲುವು !


ಮಗಳ ಕೈ ಹಿಡಿದು ತಿದ್ದಿಸುವಾಗ

ಕೈ ಬಿಡಿಸಿಕೊಂಡು ತಾನೇ ಸ್ವಂತ ಬರೆದು

ಅಪ್ಪನೆಡೆಗೆ ಮಗುಳ್ನಕ್ಕು ನೋಡಿದಾಗ

ಅದು ಅಪ್ಪನ ಎರಡನೇ ಗೆಲುವು !!


ಸೈಕಲ್ ನ ಮೇಲೆ ಕೂರಿಸಿ ಹಿಂದೆಯೇ ಓಡುವಾಗ

ಕೈ ಬಿಟ್ಟರೂ ತಿರುಗಿ ನೋಡದೇ ಮಗಳು ವೇಗವಾಗಿ ಮುಂದೆ ಚಲಿಸಿ

ಅಪ್ಪಾ ನಾ ಸೈಕಲ್ ಕಲಿತೆ ಎಂದು ಅರಚಿದಾಗ

ಅದು ಅಪ್ಪನ ಮೂರನೇ ಗೆಲುವು!!


ಮಗಳು ಓದಿನಲ್ಲಿ ಮುಂದುವರೆದಾಗ

ಒಳ್ಳೆಯ ಅಂಕಗಳನ್ನು ಪಡೆದು ಅಂಕಪಟ್ಟಿಗೆ ಸಹಿ ಹಾಕಿಸಿಕೊಳ್ಳುವಾಗ.. 

ಅಪ್ಪನ ಕಣ್ಣಂಚಿನಲ್ಲಿ ಜಾರಿದ ಬಿಂದು..

ಅದು ನಾಲ್ಕನೇ ಗೆಲುವು !


ಮಗಳು ದೊಡ್ಡವಳಾಗಿ ಅಪ್ಪನ ಅಂಕೆಯನ್ನು ಮೀರದೆ

ಅಪ್ಪನ ಸಲಹೆಗಳನ್ನು ಪಾಲಿಸುತ್ತಾ 

ತನ್ನ ಸ್ವಂತಿಕೆಯಿಂದ ಉದ್ಯೋಗ ಪಡೆದಾಗ

ಅದು ಖಂಡಿತವಾಗಿ ಐದನೇ ಗೆಲುವು!!


ಮಗಳಿಗೆ ಯೋಗ್ಯ ವರನನ್ನು ಹುಡುಕಿ

ಅವಳ ಇಚ್ಛೆಗೆ ತಕ್ಕಂತೆ ವಿವಾಹ ಮಾಡಿಕೊಟ್ಟು 

ಅವಳ ಅಗಲುವಿಕೆಯಿಂದ ನೋವಾದರೂ

ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ ಹೆಮ್ಮೆಯಲ್ಲಿ ಬೀಗಿದಾಗ..

ಅದು ಅಂತಿಮ ಗೆಲುವು.. !!


-ಪೂವಿಕೃ

Comments

Popular Posts