ಮುಪ್ಪು ಯಾರ ತಪ್ಪು?
ಚೆನ್ನಾಗಿದ್ದ ಕಣ್ಣು ಮಂಜಾಗಿದ್ದು ನನ್ನ ತಪ್ಪೇ?
ತಿನ್ನುವಾಗ ಕೈ ನಡುಗುವುದು ನನ್ನ ತಪ್ಪೇ?
ನಡೆಯುವಾಗ ಕಾಲು ಸಹಕರಿಸದಿರುವುದು ನನ್ನ ತಪ್ಪೇ?
ಹೇಳಿ, ಮುಪ್ಪು ಯಾರ ತಪ್ಪು??
ಶಕ್ತಿಯಿರುವವರೆಗೂ ದುಡಿಮೆ.. ಆದರೀಗ ನಿಶ್ಶಕ್ತಿ
ಅಧಿಕಾರವಿರುವವರೆಗೂ ಸುತ್ತ ಜನ.. ಈಗ ನಿರ್ಜನ!!
ಹಣವಿರುವವರೆಗೂ ಬಾಂಧವರು.. ಈಗ ಅನಾಥ
ಹೇಳಿ, ಮುಪ್ಪು ಯಾರ ತಪ್ಪು??
ಮಾಸಿದ ತಲೆಗೂದಲು ಗುಳಿಬಿದ್ದ ಕಣ್ಣುಗಳು
ಸುಕ್ಕಾದ ಕೈಗಳು ಜೋತುಬಿದ್ದ ಕೆನ್ನೆಗಳು..
ಮೈಗಂಟಿದ ನೂರೆಂಟು ರೋಗಗಳು..
ಹೇಳಿ, ಮುಪ್ಪು ಯಾರ ತಪ್ಪು??
ಮಕ್ಕಳಿಗೆ ಬೇಕಿಲ್ಲ ಇವರ ಈ ಕ್ಷೋಬೆ..
ಮೊಮ್ಮಕ್ಕಳ ಪಾಲಿಗಂತೂ ಇವರು ಮುದಿಗೂಬೆ..
ಆದರೂ ಆತ್ಮಹತ್ಯೆ ತರುವುದಿಲ್ಲ ಶೋಭೆ..
ಹೇಳಿ, ಮುಪ್ಪು ಯಾರ ತಪ್ಪು??
ವಯೋಸಹಜ ಪರಿವರ್ತನೆ ಈ ಮುಪ್ಪು
ಯಾರದೂ ಇಲ್ಲ ಇದರಲ್ಲಿ ತಪ್ಪು..
ಆದರೂ ಯೋಚಿಸಬೇಕು ಇದರ ಒಪ್ಪು ತಪ್ಪು!
ಹೇಳಿ, ಮುಪ್ಪು ಯಾರ ತಪ್ಪು??
-ಪೂವಿಕೃ (ವಯೋವೃದ್ಧರೊಬ್ಬರ ಜಿಗುಪ್ಸೆಯ ಸಾವಿನ ವಿಷಾದದೊಂದಿಗೆ ಬರೆದದ್ದು)
Comments
Post a Comment