ಸಂಸಾರದಲ್ಲಿ ಸರಿಗಮ
ಸಂಸಾರದಲ್ಲಿ ಸರಿಗಮ☺
ಹನ್ನೆರಡು ವರ್ಷ ಆಯ್ತು ನಾವ್ ಜೊತೆಯಾಗಿ
ಹಂಚ್ಕೊಂಡಿದ್ದೀವಿ ಕಷ್ಟಸುಖ ಸಮನಾಗಿ!!
ಹಳೆಯ ನೆನಪುಗಳೆಲ್ಲಾ ನುಗ್ಗಿ ಬರ್ತಿದೆ ಒಟ್ಟಾಗಿ
ನಾವ್ ಭೇಟಿಯಾಗಿದ್ ದಿನ ಇನ್ನೂ ಇದೆ
ಹಚ್ಚ ಹಸಿರಾಗಿ!!
ನಾನುಟ್ಟಿದ್ದೆ ಗಿಳಿಯ ಬಣ್ಣದ ಹಸಿರು ಸೀರೆ
ಅವರು ತೊಟ್ಟಿದ್ರು ಗಾಢ ಬಣ್ಣದ ತುಂಬು ತೋಳಿನ ಶರ್ಟ್
ಪರಸ್ಪರ ನೋಡಿ ಮಾತಾಡಿದ್ವಿ
ಹಿರಿಯರ ಸಮ್ಮುಖದಲ್ಲಿ ಒಪ್ಕೊಂಡ್ವಿ
ನಿಶ್ಚಿತಾರ್ಥ ನಡೆಯಿತು ಘನವಾಗಿ
ಮದುವೆಯೂ ಆಯಿತು ಅದ್ಧೂರಿಯಾಗಿ
ನಮ್ಮ ಸಂಸಾರ ಶುರುವಾಯಿತು ಸವಿಯಾಗಿ
ಸ್ವಲ್ಪ ದಿನ ಸುತ್ತಾಡಿದ್ವಿ ಕೈ ಕೈ ಹಿಡ್ಕೊಂಡ್ ಹಾಯಾಗಿ..
ಆಮೇಲೆ ಶುರುವಾಯ್ತು ನೋಡ್ರಿ ಸಂಸಾರದಲ್ಲಿ ಸರಿಗಮದ ರಾಗ..
ತಾಳ ತಂತಿ ಏನೂ ಇಲ್ಲದೇನೆ ದಿನಾ ಹಾಡ್ತಿದ್ವಿ ತೋಡಿರಾಗ..
ಅವರು ಉಚ್ಛ ಸ್ವರ ಆದ್ರೆ ನಂದು ದೀರ್ಘ ಸ್ವರ!
ಇದರ ಮಧ್ಯದಲ್ಲೇ ಸ್ವಲ್ಪ ಅನುರಾಗ ಉಕ್ಕಿ ನನಗಾಯ್ತು ಗರ್ಭಾಂಕುರ!!
ನಮ್ಮ ಕನಸುಗಳ ಸಾಕ್ಷಾತ್ಕರಿಸಲು ಬಂದಳೆಮ್ಮ ಮುದ್ದು ಮಗಳು..
ನಮ್ಮಿಬ್ಬರ ರೂಪ ಗುಣಗಳ ಮೇಳೈಸಿದ ನಮ್ಮೊಲವಿನ ಚಿಗುರು..
ಅವಳ ಲಾಲನೆ ಪಾಲನೆಯಲ್ಲಿ ಮರೆತೆವು ನಮ್ಮ ವಿರಾಗ..
ನಮ್ಮ ಬದುಕಿಗೆ ಸಿಕ್ಕಿತೊಂದು ಸುಂದರ ಸುಯೋಗ..
ಕಾರು ತಗೊಂಡ್ವಿ ಮನೆ ಕಟ್ಟಿಸಿದ್ವಿ
ನಮ್ಮ ಆಸೆಗಳೆಲ್ಲ ಪೂರೈಸಿಕೊಂಡ್ವಿ
ಕಷ್ಟಕ್ಕೆ ಕಲ್ಲಾದ್ವಿ ಸುಖಕ್ಕೆ ಅರಳಿದ್ವಿ
ಹಾಗೋ ಹೀಗೋ ಸಂಸಾರ ತೂಗಿಸ್ತಿದ್ದೀವಿ!!
ಹೌದ್ರಿ.. ಸಂಸಾರ ಅಂದ್ರೆ ಹೀಗೇ ರೀ
ಸ್ವಲ್ಪ ಸರಸ ಸ್ವಲ್ಪ ವಿರಸಾ ರೀ
ಹೇಗೋ ಇಷ್ಟು ದೂರ ಜೋಡಿಯಾಗಿ ಬಂದೀವ್ರೀ
ಹೀಗೇ ಇರಲಿ ನಮ್ಮ ಜೀವನ ಅಂತ ಹರಸ್ರೀ !!
-ಪೂವಿಕೃ
Comments
Post a Comment