ಇಲ್ಲೇ ಕಳ್ಕೊಂಡೆ!!

ಚಿತ್ರಕ್ಕೊಂದು ಕವನ

ಇಲ್ಲೇ ಕಳ್ಕೊಂಡೆ


ಹುಟ್ಟಿದಾರಭ್ಯ ನೋಡ್ತಿದ್ದೆ ಈ ಕಡಲು

ಆಡಕ್ಕೆ ಬರ್ತಿದ್ದೆ ಇಲ್ಲಿ ದಿನಾಗ್ಲೂ

ನೋಡ್ತಿದ್ದೆ ಸೂರ್ಯಾಸ್ತಮಾನದ ಸೊಬಗು

ಎಷ್ಟು ಚೆಂದಿತ್ತು ಪ್ರಕೃತಿಯ ಆ ಬೆರಗು


ಬೆಳೆದ ಮೇಲೂ ಇಲ್ಲೇ ಕಂಡ್ಕೊಂಡೆ ಬದುಕು

ಪ್ರವಾಸಿಗರಿಗೆ ಮಾರ್ತಿದ್ದೆ ಹಣ್ಣು ಹಂಪಲು

ನಾ ಮದುವೆಯಾಗಿದ್ದು ಇಲ್ಲಿಯೇ ಬೆಸ್ತನ್ನ

ನಮ್ಮ ಜೀವನ ಸಾಗಿತ್ತು ಸುಖಾಸಂಪನ್ನ


ಅದೆಲ್ಲಿತ್ತೋ ಸ್ವಾಮಿ ಸುನಾಮಿ

ಅಪ್ಪಳಿಸಿತು ಇದ್ದಕ್ಕಿದ್ದಂತೆ ಬೇನಾಮಿ

ಊರು ಕೇರಿ ಎಲ್ಲಾ ಕೊಚ್ಕೊಂಡು ಹೋಯ್ತು

ನಮ್ಮನೆ ಮಂದಿ ಎಲ್ಲಾ ಜಲಸಮಾಧಿ ಆಯ್ತು


ಕಳ್ಕೊಂಡೆ ಸ್ವಾಮಿ ಇಲ್ಲೇ ಕಳ್ಕೊಂಡೆ

ನನ್ನ ಬಾಲ್ಯವನ್ನು ಇದರ ದಡದಲ್ಲಿ

ನನ್ನ ಯೌವನವನ್ನು ಇದರ ಬುಡದಲ್ಲಿ

ನನ್ನ ಬದುಕನ್ನು ಇದರ ಒಡಲಲ್ಲಿ


ಹುಡುಕಿ ಕೊಡ್ತೀರಾ ನಾ ಕಳ್ಕೊಂಡಿರೋದನ್ನ?

-ಪೂವಿಕೃ

Comments

Popular Posts