ಗುಜರಾತ್ ಪ್ರವಾಸ ಕಥನ ಕವನ!!
ಒಂದೆಡೆ ಪೌರಾಣಿಕ ಮತ್ತೊಂದೆಡೆ ಐತಿಹಾಸಿಕ..
ಇನ್ನೊಂದೆಡೆ ಜಾಗತಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ!
ಎಲ್ಲ ಮಹತ್ವಗಳೂ ಮೇಳೈಸಿದ ಈ ಯಾತ್ರೆ..
ಸಾರಿತು ಭವ್ಯ ಭಾರತದ ಚರಿತ್ರೆ !
ಬೆಂಗಳೂರಿಂದ ಜಾಮ್ನಗರ ಸೇರಿದೆವು ವಯಾ ಮುಂಬಯಿ
ಸ್ವಾಗತಿಸಿದರು ಅಲ್ಲಿನ ವ್ಯವಸ್ಥಾಪಕರು ಮಿಲಾಯಿಸಿ ಕೈಯಿ
ಪ್ರಪಂಚದ ಬೃಹತ್ ಪೆಟ್ರೋಲಿಯಮ್ ಶುದ್ಧೀಕರಣ ಘಟಕ ವೀಕ್ಷಿಸಿದೆವು
ಬರಡು ಜಾಗವನ್ನು ಹಸಿರಾಗಿಸಿದ ಅದ್ಭುತವನ್ನೂ ನೋಡಿದೆವು
ಅಲ್ಲಿಂದ ಹೊರಟು ಸೇರಿದೆವು ದ್ವಾರಕೆ
ಶ್ರೀಕೃಷ್ಣನ ವೈಭವೋಪೇತ ಆಸ್ಥಾನಕೆ!
ನೂಕುನುಗ್ಗಲಿನ ಮಧ್ಯೆ ದರ್ಶಿಸಿದೆವು ಕೃಷ್ಣನ ಮುದ್ದು ಮುಖ..
ಅಲ್ಲಿನ ಜನರ ಭಕ್ತಿಪರವಶತೆಗೆ ಮನವಾಯ್ತು ಮೂಕ!
ಮಾರನೆ ದಿನ ಸಾಗಿದೆವು ದೋಣೆಯಲಿ
ಶ್ರೀಕೃಷ್ಣನ ಅರಮನೆಗೆ (ಬೆಟ್ ದ್ವಾರಕ)
ಬೇಸರವಾಯ್ತು ಅಲ್ಲಿನ ಜನ ಕಂಡಲ್ಲಿ ಪಾನ್ ಉಗಿಯುವ ಚಾಳಿಗೆ!
ಕಂಡೆವು ಕೃಷ್ಣನ ಅರಮನೆಯಲ್ಲಿ ರಾಣಿಯರ ವಾಸ
ಕೃಷ್ಣ ಸುಧಾಮರು ಬೇಟಿಯಾದ ನಿವಾಸ
ಅಲ್ಲಿಂದ ಹೊರಟೆವು ನೋಡಲು ನಾಗೇಶ್ವರ
ಪಕ್ಕದಲ್ಲೇ ಕುಳಿತಿದ್ದ ಬೃಹದಾಕಾರದ ಈಶ್ವರ!
ಸಂಜೆಗೆ ನೋಡಿದೆವು ಶಿವರಾಜ್ ಪುರ ಸಮುದ್ರ ತೀರದಲ್ಲಿ ಸೂರ್ಯಾಸ್ತಮಾನ
ಒಂಟೆಯ ಮೇಲೆ ಸವಾರಿ ದೋಣಿ ವಿಹಾರದ ನಂತರ ಕಂಡೆವು ಪ್ರತ್ಯೇಕ ರುಕ್ಮಿಣಿ ಭವನ
ಚೆನ್ನಾಗಿತ್ತು ಹೋಟೆಲ್ ರೋಮ ಕ್ರಿಸ್ಟೋ ನಲ್ಲಿನ ಊಟ ಉಪಚಾರ
ಬಿಲ್ಲು ಪಾವತಿಸುವಾಗಲೇ ಗೊತ್ತಾಗಿದ್ದು ಜೇಬಿನ ಸಂಚಕಾರ !
ಅಲ್ಲಿಂದ ತೆರಳಿದೆವು ಪೋರಬಂದರ್ ಗೆ
ಗಾಂಧೀಜಿಯವರ ಜನ್ಮಸ್ಥಳದ ವೀಕ್ಷಣೆಗೆ
ಶಾಲಾ ದಿನಗಳಿಂದಲೂ ಕೇಳುತ್ತಿದ್ದೆವು ಈ ಊರ ಹೆಸರು..
ಅಲ್ಲಿನ ಗಲೀಜಾದ ರಸ್ತೆಗಳ ನೋಡಿ ಹೊಮ್ಮಿತೊಂದು ನಿಟ್ಟುಸಿರು
ಕೀರ್ತಿ ಮಂದಿರದಲ್ಲಿ ನೋಡಿದೆವು ಗಾಂಧೀಜಿ ಜನಿಸಿದ ಚಿಕ್ಕ ಕೋಣೆ..
ತಿರುಗಿಸಿದೆವು ಚರಕ, ವೀಕ್ಷಿಸಿದೆವು ಅವರ ಬಗೆಗಿನ ಪುಸ್ತಕ ಸಂಗ್ರಹಣೆ
ಫೋಟೋ ಗ್ಯಾಲರಿಯಲ್ಲಿ ಅವರ ಜೀವನದರ್ಶನ
ಸ್ವಾತಂತ್ರ್ಯ ಹೋರಾಟದ ಪ್ರತಿ ಹಂತದ ಅನಾವರಣ
ರಾತ್ರಿಗೆ ಸೇರಿದೆವು ಸೋಮನಾಥಪುರ
ಅತಿಥಿ ಗೃಹದ ಪಕ್ಕದಲ್ಲೇ ಸಮುದ್ರ ತೀರ!
ಮತ್ತೊಮ್ಮೆ ಕಣ್ತುಂಬಿಕೊಂಡೆವು ಸೂರ್ಯಾಸ್ತಮಾನದ ಬೆಡಗು!
ಮೀನಿನ ವಾಸನೆಗೆ ಮುಚ್ಚಿಕೊಳ್ಳುವಂತಾಯ್ತು ಮೂಗು!
ಕ್ಷಣಾರ್ಧದಲ್ಲಾಯ್ತು ಸೋಮನಾಥನ ದರ್ಶನ
ಲೇಸರ್ ಶೋನಲ್ಲಿ ಅದರ ಐತಿಹ್ಯದ ಅವಲೋಕನ
ಸತತ ದಾಳಿಗೆ ತುತ್ತಾದರೂ ಮರಳಿ ಮರಳಿ ತಲೆಯೆತ್ತಿ ನಿಂತಿದೆ
ಸನಾತನ ಹಿಂದೂ ಧರ್ಮದ ಭವ್ಯತೆಯನ್ನು ಸಾರಿದೆ
ಅದರ ಹಿಂದಿನ ರೂವಾರಿ ನಮ್ಮ ಸರ್ದಾರ್ ವಲ್ಲಭಭಾಯಿ
ಗುಜರಾತ್ ನ ಉದ್ದಗಲವೂ ಹರಡಿದೆ ಅವರ ಛಾಯಿ!
ಮರು ದಿನ ಮುಂಜಾನೆಯೇ ಮತ್ತೊಮ್ಮೆ ಸೋಮನಾಥನ ದರ್ಶಿಸಿದೆವು..
ಗೀರ್ ಅಭಾಯರಣ್ಯ ನೋಡಲು ಕಾತರದಲ್ಲಿ ಹೊರೆಟೆವು !
ಧೂಳು, ಬಿಸಿಲಿನಲ್ಲಿ ಅರಣ್ಯ ಸುತ್ತಿ ಬಳಲಿ ಬೆಂಡಾದೆವು
ತಣ್ಣನೆ ನೆರಳಿನಲ್ಲಿ ವಿಶ್ರಮಿಸುತ್ತಾ ಸಿಂಹಗಳು ನಮ್ಮನ್ನು ಅಣಕಿಸಿದವು!
ಮಧ್ಯಾಹ್ನದ ಹೊತ್ತಿಗೆ ಸೇರಿದೆವು ಜುನಾಗಢದ ಅತಿಥಿ ಗೃಹ
ವೈಭವೋಪೇತ ಬಂಗಲೆಯಾಗಿತ್ತು ರಾಜಮನೆತನದ ಸ್ವಗೃಹ
ಊಟದ ನಂತರ ಹೊರಟೆವು ಗಿರ್ನಾರ್ ಪರ್ವತದ ಅಂಬೆಯ ದರ್ಶನಕೆ
850 ಮೀಟರ್ ಎತ್ತರದ ಪರ್ವತ ಏರಿದೆವು ರೋಪ್ ವೇ ಮೂಲಕ ಎಂಟೇ ನಿಮಿಷಕೆ!
ಏಷಿಯಾದ ಎರಡನೇ ಅತಿ ಉದ್ದದ ರೋಪ್ ವೇ ಅಚ್ಚರಿ ಮೂಡಿಸಿತು
ತೊಟ್ಟಿಲಿನಂತೆ ತೂಗಿ ಮೇಲೇರಿದ ಅನುಭವ ಎದೆ ಝಲ್ಲೆನಿಸಿತು!
ನಮ್ಮ ನಂದಿಬೆಟ್ಟಕ್ಕೂ ಇದು ಬಂದರೆ ಎಷ್ಟು ಚೆನ್ನ ಎನಿಸಿದ್ದಂತೂ ಸುಳ್ಳಲ್ಲ..
ಬರೀ ಹೊಲಸು ರಾಜಕೀಯದ ನಮ್ಮ ರಾಜಕಾರಣಿಗಳಿಗೆ ಪಾಪ ಚಿಂತಿಸಲೂ ಪುರಸೊತ್ತಿಲ್ಲ!
ಬೆಟ್ಟದ ಕೆಳಗಡೆಯೇ ಇದ್ದ ದೇವಸ್ಥಾನಗಳು
ಹಾಗೂ ಅಶೋಕನ ಶಿಲಾಶಾಸನ ನೋಡಿಯಾಯ್ತು..
ತಾಜ್ ಮಹಲಿನಂತೆಯೇ ಸುಂದರ ಕಲಾಗಾರಿಕೆಯ ಮಹಬ್ಬತ್ ಮಕ್ಬಾರಾ ನಿಶ್ಯಬ್ದವಾಗಿ ನಿಂತಿತ್ತು!
ಮಾರನೆಯ ದಿನದ ಸುದೀರ್ಘ ಪಯಣವನ್ನು ಕಡಿತಗೊಳಿಸಲು
ಗಡಿಬಿಡಿಯಲ್ಲಿ ರಾತ್ರಿಯೇ ಹೊರಟೆವು ರಾಜ್ ಕೋಟ್ ಗೆ..
ಮಾರನೆಯ ದಿನ ಕೊಂಚ ದೀರ್ಘ ಪಯಣದ ನಂತರ ಮಧ್ಯಾಹ್ನ ಸೇರಿದೆವು ಅಣಂದ್
ಸುಪ್ರಸಿದ್ಧ ಅಮುಲ್ ಡೈರಿಯ ಇತಿಹಾಸ ನೋಡಿ ನಮಗಾಯ್ತು ಆನಂದ್!
ಇಲ್ಲಿಯ ಮಾದರಿಯಲ್ಲೇ ಇರುವುದು ನಮ್ಮ ಕರುನಾಡ ಹೆಮ್ಮೆಯ ಕೆ.ಎಂ.ಎಫ್ ಡೈರಿ
ಈ ಬಿಳಿ ಕ್ರಾಂತಿಯ ರೂವಾರಿಗಳು ಸರ್ದಾರ್ ಪಟೇಲ್ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ!!
ಅಲ್ಲಿಂದ ಮುಂದುವರೆದು ಸೇರಿದೆವು ಕೆವಾಡಿಯಾ - ಸರದಾರ್ ಸರೋವರ
ದಾರಿಯುದ್ದಕ್ಕೂ ದೀಪಗಳ ಅಲಂಕಾರ ನೆನಪಿಸಿತು ಮೈಸೂರು ದಸರಾ!
ದೂರದಿಂದಲೇ ಕಾಣುತ್ತಿತ್ತು ಪ್ರಪಂಚದ ಅತಿ ಎತ್ತರದ ಪ್ರತಿಮೆ!
ಏಕತೆಯ ಹರಿಕಾರ, ಉಕ್ಕಿನ ಮನುಷ್ಯನಿಗೆ ದಕ್ಕಿದ ಹಿರಿಮೆ-ಗರಿಮೆ!
ಲೇಸರ್ ಶೋನಲ್ಲಿ ಕಂಡೆವು ಪಟೇಲರ ಜೀವನ ಚರಿತ್ರೆ
ಆ ಪ್ರತಿಮೆ ನಿರ್ಮಾಣದ ಹಿಂದಿನ ಪರಿಶ್ರಮ ಗಾಥೆ
ನರ್ಮದಾ ಆರತಿಯ ಜೊತೆಗೆ ಕಂಡೆವು ಮತ್ತೊಂದು ವಿಸ್ಮಯ ದರ್ಶನ
ನೀರಿನ ಕಾರಂಜಿಯ ಮೇಲೆ ಹೊಮ್ಮಿತು ಪೌರಾಣಿಕ ಕಥೆಯ ಲೇಸರ್ ಪ್ರದರ್ಶನ!
ಮರುದಿನ ಬೆಳಿಗ್ಗೆ ಬೃಹತ್ ಪ್ರತಿಮೆಯ ಒಳಹೊಕ್ಕೆವು
ಕೇವಲ ೪೦ ಸೆಕೆಂಡ್ನಲ್ಲಿ ೪೦೦ ಅಡಿ ಎತ್ತರ ಏರಿದೆವು!
ಪ್ರಧಾನಿ ಮೋದೀಜಿಯವರ ಕನಸು ಈ ಭವ್ಯ Statue of Unity
ಈ ಪ್ರತಿಮೆಯ ನಿರ್ಮಾತೃ ನಮ್ಮ ಹೆಮ್ಮೆಯ ಕಂಪನಿ L&T
ಸರದಾರ್ ಸರೋವರ ಅಣೆಕಟ್ಟು ವೀಕ್ಷಿಸೆದೆವು
ಆರೋಗ್ಯ ವನದಲ್ಲಿ ಔಷದೀಯ ಸಸ್ಯಗಳ ಕಂಡೆವು
ಅಲ್ಲಿಂದ ಹೊರಟು ಸೇರಿದೆವು ಅಹಮದಾಬಾದ್
ಸೇರಿದ ಕೂಡಲೇ ನೋಡಹೊರಟೆವು
ಪ್ರಮುಖ್ ಸ್ವಾಮಿಗಳ ಜನ್ಮಶತಾಬ್ದಿ
600 ಎಕರೆ ವಿಸ್ತಾರದಲ್ಲಿ ಕಟ್ಟಿದ್ದರು ತಾತ್ಕಾಲಿಕ ಅದ್ಧೂರಿ ನಗರ (township)
ವಿದ್ಯುತ್ ಚಾಲಿತ ಮೋಟಾರಿನಲ್ಲಿ ಸಂಚರಿಸಿದೆವು ಉದ್ದಗಲ
ನೋಡಿದಷ್ಟೂ ಕಣ್ತಣಿಸುವ ಬಣ್ಣ ಬಣ್ಣದ ಹೊಳೆಯುವ ಉದ್ಯಾನವನ (glow theme park)
ಸ್ವಾಮೀಜಿಗಳ ಸಾಮಾಜಿಕ ಆಂದೋಲನದ ಚಿತ್ರ ಪ್ರದರ್ಶನ (light and sound show)
ಮರುದಿನ ಬೆಳಗ್ಗೆ ಸ್ವಾಮಿ ನಾರಾಯಣರ ಅಕ್ಷರಧಾಮ ದರ್ಶನ
ಅಲ್ಲಿಂದ ತೆರಳಿದೆವು ನೋಡಲು ಸಾಬರಮತಿಯ ಸಂತನ!
ಸಾಬರಮತಿ ನದಿಯ ದಡದಲ್ಲಿ ಶಾಂತಿ ಧೂತನ ಆಶ್ರಮ
ಬಹುತೇಕ ವರ್ಷಗಳು ಗಾಂಧೀಜಿ ಜೀವಿಸಿದ ಶಾಂತಿ ಧಾಮ
ಬಹಳಷ್ಟು ಪ್ರಮುಖ ನಿರ್ಧಾರಗಳನ್ನು ತಳೆದದ್ದು ಇಲ್ಲಿಯ ಕೊಠಡಿಯಲ್ಲಿ
ದಂಡಿ ಮಾರ್ಚ್ ನ ನಂತರ ಸ್ಥಳಾಂತರವಾಗಿದ್ದರು ಬೇರೆಡೆಯಲ್ಲಿ
ಅವರು ಕುಳಿತುಕೊಳ್ಳುತ್ತಿದ್ದ ಜಾಗಕ್ಕೆ ನಮಿಸಿ
ತೆರಳಿದೆವು ಅಲ್ಲಿಂದ ನಿರ್ಗಮಿಸಿ!
ಏಕತಾನತೆಯ ಚಪಾತಿ ಸಬ್ಜಿ,ಪೋಹಾ, ಉಪ್ಪು ಖಾರವಿಲ್ಲದ ಕಿಚಡಿ ತಿಂದು ಜಡ್ಡಾಗಿತ್ತು ನಾಲಿಗೆ
ಮನ ಹಾತೊರೆಯುತ್ತಿತ್ತು ತಿನ್ನಲು ನಮ್ಮೂರ ಊಟ ತಿಂಡಿ ಬಗೆ ಬಗೆ!
ಏಳು ದಿನದ ಪ್ರವಾಸ ಮುಕ್ತಾಯವಾಯ್ತು ಇಲ್ಲಿಗೆ..
ಮರಳಿ ಬಂದೆವು ವಾಪಸ್ ನಮ್ಮ ಬೆಂಗಳೂರಿಗೆ!!
-ಪೂವಿಕೃ
Comments
Post a Comment