ನಾ ಮೌನವಾದೆ!!

ದಿನವೂ ನೀ ಬಯಸಿದ ತಿಂಡಿ ಕೊಡುವುದಿಲ್ಲ..
ಅಪರೂಪಕ್ಕೆ ಕೊಟ್ಟಾಗ ಲವ್ ಯೂ ಅಮ್ಮ ಎನುವೆ

ದಿನವೂ ನಿನಗೆ ಪಾಠ ಕಲಿಸುವುದಿಲ್ಲ..
ಅಪರೂಪಕ್ಕೆ ಕಲಿಸಿದಾಗ.. ಥ್ಯಾಂಕ್ಯೂ ಅಮ್ಮ ಎನುವೆ..

ದಿನವೂ ನಿನ್ನೊಡನೆ ಆಟವಾಡುವುದಿಲ್ಲ..
ಅಪರೂಪಕ್ಕೆ ಆಡಿದಾಗ ಹುಚ್ಚೆದ್ದು ಕುಣಿಯುವೆ..

ದಿನವೂ ನೀ ಕೇಳಿದ ವಸ್ತು ಕೊಡಿಸುವುದಿಲ್ಲ..
ಅಪರೂಪಕ್ಕೆ ಕೊಡಿಸಿದಾಗ.. ಹಿರಿ ಹಿರಿ ಹಿಗ್ಗುವೆ..

ದಿನವೂ ನೀ ತಪ್ಪು ಮಾಡಿದಾಗ ಬೈದರೂ..
ಅಪರೂಪಕ್ಕೆ ಮುದ್ದಿಸಿದಾಗ.. ಎಲ್ಲವನ್ನೂ ಮರೆಯುವೆ..

ನಿನ್ನ ಬಾಲ್ಯ ಮುಗಿಯುತ್ತಿದೆ ಎನ್ನುವುದ ಮರೆತೆನಲ್ಲ..
ಈ ಕಾಲ ಮತ್ತೆ ದೊರೆಯದು ಎಂಬುದೇ ಕಹಿ ಸತ್ಯವಲ್ಲ!

ನೀ ಕಳೆದುಕೊಂಡದ್ದು ನಿನಗೆ ಅರಿವಾಗಲಿಲ್ಲ..
ನಾ ಪಡೆದುಕೊಂಡಿದ್ದು ಏನೆಂದು ತಿಳಿಯುತ್ತಿಲ್ಲ..

ನಿನ್ನ ನಿಷ್ಕಲ್ಮಷ ಪ್ರೀತಿಗೆ ನಾ ಮೂಕಳಾದೆ..
ನಿನ್ನ ಅಲ್ಪ ತೃಪ್ತಿಗೆ ನಾ ಕಾರಣಳಾದೆ..
ನಿನ್ನ ಸ್ನೇಹಪರತೆಗೆ ನಾ ಪರವಶಳಾದೆ..
ಏನೂ ಉತ್ತರಿಸದೆ ನಾ ಮೌನವಾದೆ..
ಏನೂ ಉತ್ತರಿಸದೆ ನಾ ಮೌನವಾದೆ..

-ಪೂವಿಕೃ
( ಕೆಲಸಕ್ಕೆ ಹೋಗುವ ಓರ್ವ ತಾಯಿಯನ್ನು ಅಪರಾಧ ಪ್ರಜ್ಞೆ ಕಾಡಿದಾಗ..)

Comments

Popular Posts