ಉಕ್ಕಿನ ಹಕ್ಕಿಯನೇರಿ !!
ಉಕ್ಕಿನ ಹಕ್ಕಿಯನೇರಿ
ಆಗಸದೆಡೆಗೆ ಹಾರಿ
ಮೋಡಗಳ ನಡುವೆ ತೂರಿ
ಹೊರಟಿತು ನಮ್ಮ ಸವಾರಿ
ಅಮೃತಸರದ ಸಿಹಿ ಮೊಸರನ್ನು ಚಪ್ಪರಿಸಿ
ಭಾರತದ ಹೆಮ್ಮೆಯ ಧ್ವಜವನ್ನು ಹಾರಿಸಿ
ಸೀಮಾರೇಖೆಯ (ವಾಗಾ ಬಾರ್ಡರ್) ಶೌರ್ಯ ಪ್ರದರ್ಶನವನ್ನು ವೀಕ್ಷಿಸಿ
ಗುರು ಗ್ರಂಥಸಾಹೇಬರಿಗೆ (ಗೋಲ್ಡನ್ ಟೆಂಪಲ್) ನಮಿಸಿ..
ಜಲಿಯನ್ ವಾಲಾ ಬಾಗ್ ನ ಹೀನ ಕೃತ್ಯವ ನೆನೆಸಿ
ಆ ಕ್ಷಣದ ಭೀಕರತೆಯನ್ನು ಸ್ಮರಿಸಿ
ಕಣ್ಣಂಚಲಿ ಜಾರಿದ ಕಂಬನಿಯನ್ನು ಒರೆಸಿ
ಸಾಗಿದೆವು ಮುಂದೆ ವೀರರಿಗೆ ನಮಿಸಿ
ಎತ್ತ ನೋಡಿದರೂ ಸಮತಟ್ಟಾದ ನೆಲ
ಇಕ್ಕೆಲಗಳಲ್ಲಿ ಗೋಧಿಯ ಸಮೃದ್ಧ ಫಲ
ಮಳೆಯ ಸಿಂಚನದಿಂದ ತಂಪಾಯಿತು ನೆಲ..
ಅದೋ ಅಲ್ಲಿ ಕಾಣುತ್ತಿದೆ ಹಿಮಾಚಲ!
ಒಂದೆಡೆ ಬೆಟ್ಟ ಇನ್ನೊಂದೆಡೆ ಕಣಿವೆ
ಸಾಗುತ್ತಿದೆ ನಮ್ಮ ವಾಹನ ಅದರ ನಡುವೆ..
ಅಂಕುಡೊಂಕಿನ ಹಾದಿಯಲ್ಲಿ ಭಯದ ನಡುವೆ..
ಚಿಂತಿಸುತ್ತಿತ್ತೀ ಮನ ಬೇಕಿತ್ತಾ ಈ ಪ್ರವಾಸದ ಗೊಡವೆ..
ಕುಲುಕಾಟದ ನಡುವೆ ಸೇರಿದೆವು ಕುಲು
ಅತಿಥಿ ಗೃಹ ಸೇರಿದಾಗ ಆವರಿಸಿತ್ತು ಕತ್ತಲು..
ಬೆಳಗೆದ್ದು ಕಣ್ತೆರೆದಾಗ ಬೆಳ್ಳಿ ಬೆಟ್ಟದ ಸಾಲು..
ಓ ನಾವಿರುವುದು ಹಿಮಾಲಯದ ತಪ್ಪಲು!!
ಬಿಯಾಸ್ ನದಿಯ ನೀರಿನ ಕಲರವ ಒಂದೆಡೆ..
ಅಂಬರವ ಚುಂಬಿಸುವ ದಟ್ಟ ಮರಗಳು ಮತ್ತೊಂದೆಡೆ..
ಆವೃತವಾಗಿತ್ತು ಊರು ಬೆಟ್ಟ ಗುಡ್ಡಗಳ ನಡುವೆ
ಪ್ರಕೃತಿಯ ಸುಂದರ ಸೃಷ್ಟಿಯ ಪುರಾವೆ?
ಸಾಗಿದೆವು ಹಿಮಾಚಲದ ತಪ್ಪಲಿನೆಡೆಗೆ
ಮಣಿಕರ್ಣದಿ ಕಂಡೆವು ವಿಸ್ಮಯದ ಬಿಸಿ ನೀರಿನ ಬುಗ್ಗೆ!
ಕೊರೆಯುವ ಚಳಿಯಲ್ಲೂ ಮೈ ನವಿರೇಳಿತು ಒಮ್ಮೆಗೆ..
ಶಿರಬಾಗಿ ನಮಿಸಿದೆವು ಆ ದೇವ ಭೂಮಿಗೆ
ಮಗುವಿನ ಆಸೆಗೆ ಮಣಿದು
ದೋಣಿಯಲ್ಲಿ ಸಾಗಿ ನಲಿದು
ಬಟ್ಟೆಯೆಲ್ಲ ಒದ್ದೆಯಾಗಿ ನೆಂದು
ಹೊರಟೆವು ಹುಮ್ಮಸ್ಸಿನಲಿ ಮುಂದು
ಸರಿ ರಾತ್ರಿಯಲಿ ಸೇರಿದೆವು ಮನಾಲಿ
ಉರುಳಿತು ಇರುಳು ಹಿಮಾಲಯವೇರುವ ಕನಸಲಿ..
ರಾತ್ರಿಯಿಡೀ ಸುರಿದ ಮಳೆಗೆ ತಂಪಾಗಿತ್ತು ಇಳೆ..
ಪರ್ವತದ ಅಂಚಲಿ ಕಂಡಿತು ಹಿಮದ ರಾಶಿಯ ಹೊಳೆ!
ಉಟ್ಟ ಬಟ್ಟೆಯ ಮೇಲೆ ತೊಟ್ಟೆವು ಬೆಚ್ಚನೆ ಧಿರಿಸು..
ಕಾಲುಗಳಿಗೆ ಬೂಟು ಕೈಗಳಿಗೆ ಗ್ಲೌಸು!
ಸೂಕ್ಷ್ಮ ತಿರುವುಗಳನ್ನು ಸುತ್ತಿ ಸುಳಿದು..
ಸಾಗಿದೆವು ಮುಗಿಲೆತ್ತರಕೆ ಎಲ್ಲ ಹಂಗು ತೊರೆದು!
ಏರುತೇರುತ ಉಸಿರಾಯಿತು ಭಾರ..
ಮೈ ನಡುಗುವ ಛಳಿಗೆ ಹೂತುಹೋಯಿತು ಸ್ವರ!
ಹಿಮದ ರಾಶಿಯ ಕಂಡು ಮೂಕವಾಯ್ತು ಮನ
ಅಂತೂ ಕೈಗೂಡಿತು ರೋಹ್ತಾಂಗ್ ಪಾಸ್ ದರ್ಶನ!
ಪ್ರಥಮ ಬಾರಿಗೆ ಹಿಮದ ಸ್ಪರ್ಶ
ಮನದಲ್ಲೇನೋ ಆಹ್ಲಾದ ಹರ್ಷ
ಹಿಮದಲ್ಲಿ ಜಾರಿ ಹೊರಳಾಡಿ ಉರುಳಾಡಿ..
ಮನದಣಿಯುವವರೆಗೂ ಚೆಂಡಾಟವಾಡಿ
ಹಿಮದಲ್ಲೇ ಒಂದು ಮನೆಯ ಮಾಡಿ
ಮೊಬೈಲಿನಲ್ಲಿ ನಮ್ಮಾಟ ಸೆರೆಮಾಡಿ
ಮಕ್ಕಳಂತೆ ಕುಣಿದು ನಲಿದು ಓಡಿ
ಸಂಭ್ರಮಿಸಿದೆವು ಎಲ್ಲರೂ ಜೊತೆಗೂಡಿ!
ಸ್ಬಲ್ಪ ಸಮಯದಿ ಹಿಮವು ತನ್ನ ಪ್ರಬಾವ ಬೀರಿತು
ಕೈ ಕಾಲುಗಳು ಸೆಳೆತಕ್ಕೆ ಸಿಲುಕಿ ನಲುಗಿತು..
ಪ್ರತೀಕ್ಷಳಿಗೆ ಮೊದಲು ಅದರ ಅರಿವಾಯಿತು..
ಆಟ ಸಾಕೆಂಬ ಹಠ ಇಕ್ಕಟ್ಟಿಗೆ ಸಿಲುಕಿಸಿತು!
ಅವಳನ್ನು ಕಾರಿಗೆ ಹತ್ತಿಸಿ ನಮ್ಮಾಟ ಮುಂದುವರೆಸಿದೆವು..
ಕೆಲ ಹೊತ್ತಿನ ನಂತರ ಸಾಕೆನಿಸಿ ಹಿಂದೆ ಮರಳಿದೆವು..
ಮಗುವ ಅಳುವಿಗೆ ಕಾರಣ ತಿಳಿದು ಪೇಚಾಡಿದೆವು !
ಅವಳನ್ನು ಸಂತೈಸಲು ಅಪ್ಪಿ ಮುದ್ದಾಡಿದೆವು!
ಪರ್ವತದಿಂದ ಕೆಳಗಿಳಿದೆವು ಸಂತಸದಲ್ಲಿ..
ಏನೋ ಸಾಧಿಸಿದ ಖುಷಿ ಕಣ್ಣಂಚಲ್ಲಿ..
ಮರೆಯಲಾಗದ ನೆನಪುಗಳ ಹೊತ್ತು ಮನದಲ್ಲಿ..
ಇದೇ ಅಲ್ಲವೇ ಸಾರ್ಥಕತೆ ಎನಿಸಿತು ಆ ಕ್ಷಣದಲ್ಲಿ!!
ಬೆಂಗಳೂರಿನವರು ಅಲ್ಲಿನ ಉಡುಪಿ ಹೋಟೆಲ್ನಲ್ಲಿ ಕಂಡಾಗ!
ಪುಳಕವಾಯಿತು ಕನ್ನಡದ ಕಂಪು ಕಿವಿಗಾನಿಸಿದಾಗ..
ಉಲ್ಲಾಸವಾಯಿತು ತಾಜಾ ಫಿಲ್ಟರ್ ಕಾಫಿಯ ರುಚಿ ಸಿಕ್ಕಾಗ
ಹಂ... ನಮ್ಮೂರಿನ ನೆನಪು ಬಿಡದೇ ಕಾಡಿತು ಆಗ!
ಹಿಡಿಂಬೆ ಘಟೋತ್ಕಚರ ದರ್ಶನ ಮಾಡಿ..
ಅಲ್ಲಿನ ಬಟ್ಟೆಯುಟ್ಟು ನಲಿದಾಡಿ..
ಸ್ವೆಟರ್ ಶಾಲ್ ಗಳ ಶಾಪಿಂಗ್ ಮಾಡಿ.
ಭಾರದ ಮನಸಿಂದ ಬೀಳ್ಗೊಂಡೆವು ಮನಾಲಿ!
ಮತ್ತೆ ಕುಲುಕಾಟದ ನಡುವೆ ಸಾಗಿತು ನಮ್ಮ ಸವಾರಿ..
ಕಿರುದಾರಿಗಳಲ್ಲಿ ಸಾಗಿ ನಿಧಾನವಾಗಿ ಏರಿ..
ದೂರ ಬೆಟ್ಟದ ನಡುವೆ ಕಂಡಿತು ಮಿಣಕು ದೀಪಗಳ ಸಾಲು ..
ಇನ್ನೂ ಎತ್ತರೆತ್ತರ ಏರಿ ಸೇರಿದೆವು ಶಿಮ್ಲಾ ಎಂಬ ನಗರಿ!!
ಬೆಳಗೆದ್ದು ಹನುಮಾನ್ (ಜಾಕು) ದೇವರ ದರ್ಶನವಾಯ್ತು..
ಮಿಲಿಟರಿ ವಸ್ತು ಪ್ರದರ್ಶನಾಲಯದಲ್ಲಿ ಭಾರತ ದರ್ಶನವಾಯ್ತು!
ಅಲ್ಲಿನ ಮಾಲ್ನಲ್ಲಿ ಸ್ವಲ್ಪ ಶಾಪಿಂಗ್ ಆಯ್ತು..
ಅಷ್ಟರಲ್ಲಿ ಚಂಡಿಘಡಕ್ಕೆ ಹೊರಡಲು ಹೊತ್ತಾಯ್ತು!
ಕಲುಷಿತವಿಲ್ಲದ ಗಾಳಿ ವಿಶಾಲವಾದ ರಸ್ತೆ
ಯೋಜನಾಬದ್ಧ ನಗರಿಯ ಅತ್ಯುತ್ತಮ ವ್ಯವಸ್ಥೆ!!
ಕಂಡು ನೆನಪಾಯ್ತು ಬೆಂಗಳೂರಿನ ದುರ್ವ್ಯವಸ್ಥೆ..
ಅಯ್ಯೋ.. ಏನ್ ಮಾಡೋದು ಹೀಗೇ ನಮ್ಮ ಅವಸ್ಥೆ!
ಪುನಃ ಉಕ್ಕಿನ ಹಕ್ಕಿಯನೇರಿ
ಮೋಡಗಳ ನಡುವೆ ತೂರಿ
ಬಂದು ಸೇರಿದೆವು ನಮ್ಮ ಉದ್ಯಾನ ನಗರಿ..
ಆಹ್.. ಎಷ್ಟೇ ಸುತ್ತಿ ಬಂದರೂ ನಮ್ಮೂರೇ ನಮಗೆ ಸರಿ!!!!
ಏನಂತೀರಿ??
-ಪೂವಿಕೃ
Comments
Post a Comment