ಜೀವನವೇ ಒಂದು ಚದುರಂಗದಾಟ..

ಬಾಲ್ಯದಲ್ಲಿ ಬರೀ ಆಟ ಪಾಠ
ಓದಿ ಮುನ್ನಗ್ಗಬೇಕೆಂಬ ಹಠ
ಯೌವನದಲ್ಲೋ ಪ್ರೀತಿಯ ಚೆಲ್ಲಾಟ
ಸಹವಾಸಕ್ಕಂಟಿದ ನೂರೆಂಟು ಚಟ

ಓದು ಮುಗಿದ ನಂತರ ಕೆಲಸದ ಹುಡುಕಾಟ
ಕೆಲಸ ಸಿಕ್ಕ ನಂತರ ಹುಡುಗಿಯೆಡೆಗೆ ನೋಟ
ಹುಡುಗಿ ಸಿಕ್ಕ ನಂತರ ಮದುವೆಯ ಓಡಾಟ
ಮದುವೆಯ ನಂತರ ಸಂಸಾರದಲ್ಲಿ ಈಜಾಟ

ಇಲ್ಲಿಗೆ ಮುಗಿಯಲಿಲ್ಲ ಬಾಳಿನಾಟ
ಶುರುವಾಯಿತು ಮಕ್ಕಳಾಗಲಿಲ್ಲವೆಂಬ ಒದ್ದಾಟ
ಅದಕ್ಕಾಗಿ ಪೂಜೆ ಪುನಸ್ಕಾರಗಳ ಪರಿಪಾಠ
ಮಕ್ಕಳಾದ ನಂತರ ಸಂತೋಷಕೂಟ

ಲಾಲನೆ ಪಾಲನೆಯಲ್ಲಿ ಕಾಲದ ಓಟ
ಆದರೂ ನಿಲ್ಲಲಿಲ್ಲ ಬಯಕೆಯ ನಾಗಾಲೋಟ
ಒಂದು ಸ್ವಂತ ಮನೆ ಬೇಕೆಂಬ ಹಠ
ಅದಕ್ಕಾಗಿ ಹುಡುಕಾಟ ಅಲೆದಾಟ

ಮನೆ ಕಟ್ಟಿದರೂ ತೀರದ ಜಂಜಾಟ
ಸಾಲ ಮಾಡಿ ತೀರಿಸಲು ಪರದಾಟ
ಆಸ್ತಿ ಪಾಸ್ತಿಗಾಗಿ ಹೊಡೆದಾಟ ಬಡಿದಾಟ
ನಾನು ನನ್ನದು ಎಂಬ ಅಹಮ್ಮಿನ ಮೇಲಾಟ

ಅಧಿಕಾರ ಅಂತಸ್ತುಗಳ ತುಲನೆಯ ನೋಟ
ಅದನ್ನು ಸಂಪಾದಿಸಲು ದಿನನಿತ್ಯದ ಹೋರಾಟ
ಇದರ ಮಧ್ಯೆ ಖಾಯಿಲೆ ಕಸಾಲೆಗಳ ಆರ್ಭಟ
ಮಕ್ಕಳು ಮರಿಗಳ ಹುಚ್ಚಾಟ ರಂಪಾಟ

ಮುಪ್ಪಡರಿದ ಸಮಯದಲ್ಲಿ ಮಸುಕಾದ ನೋಟ
ಕಳೆದುಹೋದ ಸಮಯದ ಮೆಲುಕಾಟ
ಜೀವನದಿಂದ ಮುಕ್ತಿಗಾಗಿ ತಡಕಾಟ
ಆಧ್ಯಾತ್ಮದತ್ತ ಚಿಂತನೆಯ ನೋಟ

ಜೀವನವೇ ಒಂದು ಚದುರಂಗದಾಟ
ಸೋಲು ಗೆಲುವು ಕಲಿಸುತ್ತದೆ ಜೀವನ ಪಾಠ
ಭಗವಂತನ ಇಚ್ಛೆಯಂತೆ ನಡೆಯುವುದೀ ಆಟ
ಅವನು ತೋರಿದ ಹಾದಿಯಲ್ಲಿ ನಮ್ಮ ನಡೆದಾಟ...

-- ಪೂವಿಕೃ

Comments

Popular Posts