ದೇಗುಲ ದರ್ಶನ!!

ದೇಗುಲ ದರ್ಶನ!!


ಅಂತೂ ಇಂತೂ ಹೊರೆಟೆವು ನಾವು

ದೇಗುಲಗಳ ದರ್ಶನಕೆಂದು

ಖಂಡಿತವಾಗಿ ತಿಳಿದಿರಲಿಲ್ಲ ಇದು

ತಿರುಪತಿಗಿಂತ ಕಷ್ಟಕರವೆಂದು 


ಧರ್ಮದರ್ಶನಕೆ ಬಹು ಸಮಯವೆಂದು 

ಟಿಕೆಟ್ ಪಡೆದು ಸರತಿಯಲ್ಲಿ ನಿಂತೆವು..

ಆದರೂ ದರುಶನ ಪಡೆಯಲು

ಮೂರು ಗಂಟೆಯವರೆಗೂ ಕಾದೆವು!


ಮಧುರೈ ಮೀನಾಕ್ಷಿಯ ದರ್ಶಿಸಿ

ಶರವಣಭವದಲ್ಲಿ ಉಂಡು

ತಿರುಮಲೈ ನಾಯಕರ್ ಅರಮನೆ ವೀಕ್ಷಿಸಿ

ರಾಮೇಶ್ವರಕ್ಕೆ ತೆರಳಿತು ನಮ್ಮ ದಂಡು!


ಪಾಂಬನ್ ಸೇತುವೆಯ ಮೇಲೆ ನಿಂತು

ಸೆಲ್ಫೀ ತೆಗೆದು ಸಂಭ್ರಮಿಸಿದೆವು

ಅಬ್ದುಲ್ ಕಲಾಮ್ ರವರ ಮ್ಯೂಸಿಯಂನಲ್ಲಿ

ಅವರ ಸಾಧನೆಗಳಿಗೆ ಸಲಾಮ್ ಹೊಡೆದೆವು!


ಧನುಷ್ಕೋಡಿಯಲ್ಲಿ ಪಾಳುಬಿದ್ದ ಮನೆಗಳನ್ನು ವೀಕ್ಷಿಸಿದೆವು..

ಅಲ್ಲಿನ ಬೀಚ್ ನಲ್ಲಿ ಆಟವಾಡಿ ಸಂತಸಪಟ್ಟೆವು

ಪಡುವಣದಲ್ಲಿ ಸೂರ್ಯಾಸ್ತಮಾನಕ್ಕಾಗಿ ಕಾದೆವು..

ಮೋಡಗಳ ಆಟದಿಂದ ಕಾಣದೇ ನಿರಾಶೆಗೊಂಡೆವು 


ರಾಮೇಶ್ವರದಲ್ಲಿಯೂ ದರ್ಶನಕ್ಕೆ ಪರದಾಡಿದೆವು

ಸರತಿಯಲ್ಲಿ ನಿಂತು ನಿಂತು ಬೇಸೆತ್ತೆವು

ಮಕ್ಕಳಂತೂ ಹಸಿವಿನಿಂದ ಕಂಗಾಲಾದರು

ದೇಗುಲದೊಳಗೇ ಅಂಗಡಿಗಳ ಕಂಡು ಬೇಸರಗೊಂಡೆವು


ಭಾರತಾಂಬೆಯ ತುತ್ತ ತುದಿ ಕನ್ಯಾಕುಮಾರಿ

ನೋಡಲು ಹಡಗಿನಲ್ಲಿ ಹೊರಟಿತು ನಮ್ಮ ಸವಾರಿ..

ಬಿಸಿಲ ಝಳವ ತಪ್ಪಿಸಲು ಟೋಪಿ ತೊಟ್ಟೆವು

ಶಾರದೆಯ ಪಾದಗಳಿಗೆರಗಿ ವಿವೇಕಾನಂದರ ದರ್ಶನ ಪಡೆದೆವು..


ತಮಿಳುನಾಡಿನ ಗಡಿ ದಾಟಿ ಕೇರಳಕ್ಕೆ ಹೋದೆವು

ತಿರುವನಂತಪುರದಿ ಅನಂತಪದ್ಮನಾಭನ ಕಂಡೆವು..

ಸರತಿ ಸಾಲಿನ ಗೋಳು ಇಲ್ಲಿಯೂ ತಪ್ಪಲಿಲ್ಲ

ದೂರದಿಂದಲೇ ಕೈಮುಗಿದು ಹೊರಬಂದೆವೆಲ್ಲ!!


ದೇವಸ್ಥಾನಗಳೂ ವ್ಯಾಪಾರದ ತಾಣಗಳಂತೆ ಕಂಡವು

ನೀತಿ ನಿಯಮಗಳೆಲ್ಲ ಬರೀ ಆಡಂಬರವೆನಿಸಿದವು!

ಭಕ್ತಿಭಾವವೆಲ್ಲ ನಶಿಸಿ ಮನಸು ಮುರಿಯಿತು

ದೇಗುಲಗಳ ಗರಿಮೆಯೇ ಕಾಣದಾಯಿತು


ಪ್ರಕೃತಿ ತಾಣಗಳೇ ಸ್ವಲ್ಪ ಉತ್ತಮವೆನಿಸಿತು

ಯಾರ ಹಂಗೂ ಇಲ್ಲದೇ ಕಣ್ಣ ತಣಿಸಿತು

ದೇವನಿಹನು ತಾನೇ ಎಲ್ಲೆಡೆಯಲ್ಲೂ

ಭಕ್ತಿಯಿದ್ದರೆ ಸಾಕು ನಮ್ಮ ಮೈಮನದಲ್ಲೂ


ಅಂತೂ ಇಂತೂ ನಮ್ಮ ಪ್ರವಾಸ ಅಂತ್ಯಗೊಂಡಿತು

ನಮ್ಮ ಊರಿನ ದಾರಿ ಹಿಡಿದು ಮರಳಿ ಬಂದೆವು

ಎಷ್ಟೂರು ಸುತ್ತಿದರೂ ಏನೆಲ್ಲ ನೋಡಿದರೂ

ಕರುನಾಡಿಗಿಂತ ಮಿಗಿಲಿಲ್ಲವೆಂದು ಅರ್ಥವಾಯಿತು !!


-ಪೂವಿಕೃ (ಮಧುರೆ, ರಾಮೇಶ್ವರ, ಕನ್ಯಾಕುಮಾರಿ, ತಿರುವನಂತಪುರಂ ಯಾತ್ರೆಯ ನಂತರ ಬರೆದದ್ದು)

Comments

Popular Posts