ಆಧುನಿಕ ವಚನಗಳು!
ವಿದ್ಯೆಗೂ ಬುದ್ಧಿಗೂ ಎತ್ತಣಿಂದೆಂತ್ತ ಸಂಬಂಧವಯ್ಯ?
ವಿದ್ಯೆ ಇಲ್ಲದೆಯೂ ಬುದ್ಧಿ ಇರಬಹುದು
ಬುದ್ಧಿಯೇ ಇಲ್ಲದಿರೆ ವಿದ್ಯೆ ಎಲ್ಲಿಂದ ಒಲಿಯುವುದು ಪೆದ್ದುಗುಂಡ !
ಗೊತ್ತಿರದ ಊರಿನಲಿ ಗೊತ್ತಿಲ್ಲದ ಹೊತ್ತಿನಲ್ಲಿ
ಗೂಗಲ್ ಮ್ಯಾಪನ್ನು ನಂಬಿಕೊಂಡು
ಸುತ್ತಿ ಸುಳಿದು ದಾರಿ ತಪ್ಪಿದೊಡೆ
ಯಾರನ್ನು ಶಪಿಸುವೆಯೋ ಪೆದ್ದುಗುಂಡ !
ಟಿಕೆಟ್ ಪಡೆದು ಮೂರು ಗಂಟೆ ಕ್ಯೂನಲ್ಲಿ ನಿಂತು
ಧರ್ಮ ದರ್ಶನದಲ್ಲಿ ಒಂದು ಗಂಟೆಗೇ ಹೊರ ಬಂದವರ ನೋಡಿ
ಟಿಕೆಟ್ ದರ್ಶನಕ್ಕಿಂತ ಧರ್ಮ ದರ್ಶನವೇ ಲೇಸೆಂದ ಪೆದ್ದುಗುಂಡ !
ಎಷ್ಟೂರು ಸುತ್ತಿದರೂ ಏನೆಲ್ಲಾ ನೋಡಿದರೂ
ಕರುನಾಡಿಗಿಂತ ಮಿಗಿಲಿಲ್ಲ ಕನ್ನಡಕ್ಕಿಂತ ಮಿಗಿಲಾದ ಭಾಷೆಯಿಲ್ಲವೆಂದ
ನಿಜವಾದ ಕನ್ನಡ ಪ್ರೇಮಿ ಈ ಪೆದ್ದುಗುಂಡ!!
ಪೂವಿಕೃ (ಸಾಹಿತ್ಯ ಸಿಂಚನದಲ್ಲಿ ದ್ವಿತೀಯ ಬಹುಮಾನ ಪಡೆದ ವಚನಗಳು)
Comments
Post a Comment