ಕೈ ಎತ್ತಿ ನೀಡುತ್ತಿದ್ದ ಜೀವ !!(ನನ್ನ ಅತ್ತೆಗೆ ಶ್ರದ್ಧಾಂಜಲಿ ಪೂರ್ವಕ)
ಕೈ ಎತ್ತಿ ನೀಡುತ್ತಿದ್ದ ಜೀವ ಇಂದು ಕೈ ಚಾಚಿ ಮಲಗಿದೆ..
ದೇವರಿಗೆ ಹೂವಿಡದೆ ತಿಂಡಿ ತಿನ್ನದ ಜೀವ ಇಂದು ಬಾಯ್ಮುಚ್ಚಿ ಮಲಗಿದೆ..
ಎವೆಯಿಕ್ಕದೆ ನೋಡುತ್ತಿದ್ದ ಕಣ್ಣುಗಳು ಇಂದು ದಣಿದಂತೆ ಅರೆಮುಚ್ಚಿದೆ..
ತಟ್ಟಾಡಿದರೂ ಇಡುತ್ತಿದ್ದ ಹೆಜ್ಜೆ ಇಂದು ಅಲುಗಾಡದೇ ನಿಶ್ಚಲವಾಗಿದೆ..
ತಡವರಿಸಿ ಆಡುತ್ತಿದ್ದ ಮಾತು ಇಂದು ಮಾಯವಾಯಿತು..
ಮೂಗಿನಲ್ಲಾಡುತ್ತಿದ್ದ ಉಸಿರು ಗಂಟಲಿನಲ್ಲಿ ಕ್ಷೀಣವಾಯಿತು..
ಸದಾ ಕಾತರಿಸುತ್ತಿದ್ದ ಕಿವಿಗೆ ಇಂದು ಏನೂ ಕೇಳದಾಯಿತು..
ಸದಾ ಚೈತನ್ಯದಿಂದ ಇರುತ್ತದ್ದ ಜೀವ ಇಂದು ಮೂಲೆಯಲ್ಲಿ ಮುದುಡಿ ಮಲಗಿತ್ತು..
ಎಷ್ಟೇ ಉಪಚರಿಸಿದರೂ ಆ ಜೀವ ಚೇತರಿಸಿಕೊಳ್ಳಲಿಲ್ಲ..
ಎಚ್ಚೆತ್ತುಕೊಂಡು ಮಾತಾಡುವರೆಂಬ ಆಸೆ ಕೈಗೂಡಲಿಲ್ಲ..
ನಮ್ಮ ಮನೆಯ ನಂದಾದೀಪ ನಂದಿಹೋಯಿತಲ್ಲ..
ಬೆಳಕಿನಿಂದ ಕತ್ತಲೆಗೆ ನಮ್ಮ ದೂಡಿತಲ್ಲ..
ಓ ದೇವರೇ ಆ ಜೀವಕ್ಕೆ ಸದ್ಗತಿ ನೀಡು
ಅವರಿಲ್ಲದೆ ಬದುಕುವ ಶಕ್ತಿ ನೀಡು
ಕರುಣೆಯ ಬೆಳಕನ್ನು ನಮ್ಮೆಡೆಗೆ ಪಸರಿಸು
ಆ ಹಿರಿಯ ಜೀವಕ್ಕೆ ಮುಕ್ತಿ ನೀಡಿ ಹರಸು
ನಮ್ಮ ಅತ್ತೆ ರತ್ನಾಮಣಿಯವರ ಆತ್ಮಕ್ಕೆ ಮುಕ್ತಿ ಸಿಗಲಿ ಎಂದು ಕೋರುವ..
ಪೂವಿಕೃ 🙏
Comments
Post a Comment