ಆ ಐದು ದಿನಗಳು!!

ದಿನ 1 (24/09/2020, ಗುರುವಾರ)


"ಪಾಸಿಟವ್" ಅಂತ ರಿಸಲ್ಟ್ ಬಂದಿತ್ತು.. ಆ ಭಯ ನಿಜವಾಗಿತ್ತು!! ಕೊರೋನಾ ಪಾಸಿಟಿವ್ ಆಗಿದ್ದು 76ರ ಹರೆಯದ ನಮ್ಮ ಅಮ್ಮನಿಗೆ. ನನ್ನ ಅಣ್ಣನಿಗೆ ವಾರದಿಂದ ಜ್ವರವಿತ್ತು. ಅವನು ಅದು ಸುಮ್ಮನೆ ವೈರಲ್ ಫೀವರ್ ಇರಬಹುದು ಅಂತ ಟೆಸ್ಟ್ ಮಾಡಿಸಿಕೊಳ್ಳಲಿಲ್ಲ. ಮನೆಯಲ್ಲೇ ಇದ್ದುದ್ದರಿಂದ ಎಲ್ಲರಿಗೂ ಹರಡಿ, ಸ್ವಲ್ಪ ಜ್ವರ ನೆಗಡಿಯಂತಹ ಲಕ್ಷಣಗಳು ಅದಾಗಲೇ ಶುರುವಾಗ್ತಿತ್ತು. ನಮ್ಮ ಅಮ್ಮನಿಗೆ ಈಗಾಗಲೇ ಸುಮಾರು 35 ವರ್ಷದಿಂದ ಸಕ್ಕರೆ ಕಾಯಿಲೆ ಇತ್ತು. ಇದರಿಂದ ನರಗಳು ವೀಕ್ ಆಗಿ ನಡೆಯುವುದು ಕಷ್ಟವಾಗಿತ್ತು. ವಾಕರ್ ಸಹಾಯದಿಂದ ನಡೆಯುತ್ತಿದ್ದರು. ಒಮ್ಮೊಮ್ಮೆ ಕಾಲು ಕುಸಿದು ಹಾಗೆ ಕೆಳಗೆ ಕೂತುಬಿಡುತ್ತಿದ್ದರು, ಇಬ್ಬರು ಸೇರಿ ಎತ್ತಬೇಕಿತ್ತು. ನಮ್ಮ ಅಣ್ಣನೇ ಎತ್ತಬೇಕಿತ್ತು ಕೆಲವು ಸಲ. ಹೀಗಾಗಿ ದೂರ ಇರಲು ಸಾಧ್ಯವಾಗದೆ ನಮ್ಮ ಅಮ್ಮನಿಗೂ ಸೋಂಕು ತಗುಲಿತ್ತು. ನಮ್ಮಮ್ಮನಿಗೆ  ವಯೋಸಹಜವಾಗಿ ಕಿವಿಯೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ಈಗ ಮಾತಾಡಲು ಸ್ವರವೂ ಜೋರಾಗಿ ಬರುತ್ತಿರಲಿಲ್ಲ. ಸರಿ ಆಸ್ಪತ್ರೆಗೆ ಸೇರಿಸುವುದೊಂದೆ ದಾರಿ. ಆಂಬುಲೆನ್ಸ ಗೆ ಹೇಳಿ ಆಸ್ಪತ್ರೆಗೆ ಸೇರಿಸಲು ನಮ್ಮ ಅಕ್ಕ ಬೆಂಗಳೂರಿಂದಲೇ ಹೇಳಿ ವ್ಯವಸ್ಥೆ ಮಾಡಿದ್ದಳು. ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದೆವು. ಅದಾಗಲೇ ನಮ್ಮ ಅಮ್ಮ ತುಂಬಾ ಸುಸ್ತಾಗಿದ್ದರು. ಬೆಳಿಗ್ಗೆಯಿಂದ ಕಣ್ಣೇ ಬಿಟ್ಟಿರಲಿಲ್ಲವಂತೆ ಮಾತಾಡಲು ಆಗದಷ್ಟು ಸುಸ್ತಾಗಿದ್ದರಂತೆ. ಸ್ವಲ್ಪ ಹಾಲು ಕುಡಿಸಿದ್ದರಂತೆ ಆಸ್ಪತ್ರೆಗೆ ಸೇರಿಸುವ ಮುನ್ನ. ಅಲ್ಲಿನ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಲು ಜೊತೆಗೆ ಯಾರೂ ಹೋಗಿಲ್ಲ. ಮನೆಯಲ್ಲಿರುವವರೆಲ್ಲರಿಗೂ ಸುಸ್ತು. ನಮ್ಮ ಅಕ್ಕ ಹಾಗೂ ಅವಳ ಮಗ ಬೆಂಗಳೂರಿಂದ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಗುರುವಾರ ಬೆಳಗ್ಗೆಯೇ ಹೊರಟರು. ಅವರು ತಲುಪುವಷ್ಟರಲ್ಲಿ ನಮ್ಮ ಅಮ್ಮನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.  ಅದು ಕೇವಲ ಕೋವಿಡ್ ಕೇರ್ ಸೆಂಟರ್. ಅಲ್ಲಿ ನೂರಾರು ಜನ ಕೊರೋನಾ ಸೋಂಕಿತರು ಇದ್ದರು. ಅವರು ಬರೀ ಊಟ ತಿಂಡಿ ತಂದಿಟ್ಟು ಮಾತ್ರೆ ಕೊಟ್ಟು ಹೋಗುವರು ಅಷ್ಟೇ. ತಿನ್ನೋದು ಬಿಡೋದು ರೋಗಿಗಳಿಗೆ ಸೇರಿದ್ದು. ನಮ್ಮ ಅಮ್ಮನಿಗೆ ಪಾಪ ಕೂತು ತಿನ್ನಲೂ ಶಕ್ತಿಯಿಲ್ಲ. ಯಾರೂ ನೋಡುವವರಿಲ್ಲ, ಕೇಳುವವರಿಲ್ಲ.. 


ನಮ್ಮ ಕಸಿನ್ಸ್ ಸಹಾಯದಿಂದ ಅಲ್ಲಿ ಕೆಲಸ ಮಾಡುವ ಒಬ್ಬ ಕೇರ್ ಟೇಕರ್ ನ ಪರಿಚಯ ಮಾಡಿಕೊಂಡು ಅವಳ ಮುಖಾಂತರ ಸ್ವಲ್ಪ ನೀರಾಗಿ ಕಲಿಸಿದ ಸಾರನ್ನ ಹಾಗೂ ಮೊಸರನ್ನವನ್ನು ತಿನ್ನಿಸಲು ಒಳಗೆ ಕೊಟ್ಟು ಕಳಿಸಿದಳು ನಮ್ಮಕ್ಕ. ಹಾಗೆಯೇ ಮೊಬೈಲ್ ಕೊಟ್ಟು ವಿಡಿಯೋ ಕಾಲ್ ಮಾಡಿ ಮಾತಾಡಿಸುವಂತೆ ಹೇಳಿದಳು. ವಿಡಿಯೋ ಕಾಲ್ ಮಾಡಿಸಿದಾಗ.. ನಮ್ಮಕ್ಕ "ಅಮ್ಮಾ ಊಟ ಮಾಡಮ್ಮ ಕಳಿಸಿದ್ದೀನಿ" ಅಂದಾಗ.. "ನಿಮ್ಮದೆಲ್ಲಾ ಊಟ ಆಯ್ತಾ" ಎಂದು ಕೇಳಿದರಂತೆ!! ಅದಲ್ಲವೇ ತಾಯಿಯ ಹೃದಯ!!(ಅದೇ ಕಡೆಯ ಮಾತಾಗುವುದೆಂದು ಯಾರಿಗೂ ತಿಳಿದಿರಲಿಲ್ಲ). ಸ್ವಲ್ಪ ಸಾರು ಅನ್ನ ತಿಂದರಂತೆ. ಉಳಿದದ್ದು ರಾತ್ರಿಗೆ ತಿನ್ನಿಸು ಅಂತ ಹೇಳಿ ನಮ್ಮ ಅಕ್ಕ ಬೆಂಗಳೂರಿಗೆ ವಾಪಸ್ಸಾದಳು. ಅಲ್ಲಿದ್ದರೂ ಹೇಗೂ ನಾವು ಒಳಗೆ ಹೋಗುವ ಹಾಗಿಲ್ಲ.. ಏನೂ ಮಾಡುವ ಹಾಗಿಲ್ಲ.. ಹಾಗಾಗಿ ವಾಪಸ್ಸಾದಳು.



ದಿನ 2 (25/09/2020, ಶುಕ್ರವಾರ)


ಮಾರನೆ ದಿನ ಬೆಳಿಗ್ಗೆಯ ಪಾಳಿಗೆ ಇನ್ನೊಬ್ಬಳು ಕೇರ್ ಟೇಕರ್. ಅವಳಿಗೆ ನಮ್ಮಮ್ಮನ ಪರಿಸ್ಥಿತಿ ಗೊತ್ತಿಲ್ಲ.  ಅಲ್ಲಿಯೇ ಉಪಹಾರ ಕೊಟ್ಟರೂ ಬೆಳಿಗ್ಗೆ ಯಾರೂ ತಿನ್ನಿಸುವವರಿಲ್ಲ. ಮತ್ತೆ ಫೋನುಗಳ ಮೂಲಕ ತಿನ್ನಿಸಲು  ಹೇಳಿಸಿದ್ದಾಯಿತು. ಅಷ್ಟರಲ್ಲಿ ನಮ್ಮ ಅಮ್ಮ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮಧ್ಯಾಹ್ನದ ಊಟಕ್ಕೆ ನಮ್ಮ ಸೋದರತ್ತೆಯ ಮನೆಯಿಂದ ನಮ್ಮ ಕಸಿನ್ ತೆಗೆದುಕೊಂಡು ಹೋಗಿ ಕೊಟ್ಟ. ಊಟ ಮಾಡಿಸಲು ನಮ್ಮಮ್ಮ ಕಣ್ಣೇ ಬಿಡಲಿಲ್ಲವಂತೆ. ನಮಗೋ ಇಲ್ಲಿ ಸಹಿಸಲಾಗದ ಸಂಕಟ. ಅಲ್ಲಿಗೆ(ಚಿ.ಬ.ಪುರ) ಹೋದರೆ ಮನೆಗೆ ಹೋಗುವಂತಿಲ್ಲ. ಬೇರೆಡೆ ಇದ್ದು ಊಟ ತಿಂಡಿ ಕಳಿಸಿಕೊಡುವುದೊಂದೇ ದಾರಿ. ನಾನು ಹಾಗೂ ನಮ್ಮಕ್ಕ ಅದೇ ಸರಿಯೆಂದು ಅಲ್ಲಿಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದೆವು. ಅಷ್ಟರಲ್ಲಿ..ಅಲ್ಲಿನ ಡಾಕ್ಟರ್ ಪರೀಕ್ಷಿಸಿ, ಇವರಿಗೆ ಶುಗರ್ ಜಾಸ್ತಿ ಆಗಿದೆ.. ಯಾವುದಕ್ಕೂ ರೆಸ್ಪಾಂಡ್ ಮಾಡುತ್ತಿಲ್ಲ.. ನಾವು ಕೋವಿಡ್ ಬಿಟ್ಟು ಬೇರೆ treatment ಕೊಡಲ್ಲ.. ಬೇರೆ ಕಡೆ ಕರ್ಕೊಂಡು ಹೋಗಿ ಸೇರಿಸಿ ಎಂದುಬಿಟ್ಟರು. ಸರಿ ಇಲ್ಲೇ ಬೆಂಗಳೂರಿಗೆ shift ಮಾಡಿಸೋಣ. ನಮಗೂ ಹೋಗಿ ಬರಲು ಅನುಕೂಲವಾಗುತ್ತದೆಂದು, ಇಲ್ಲಿ ಆಸ್ಪತ್ರೆಗಳನ್ನು ಹುಡುಕಲು ಶುರು ಮಾಡಿದೆವು.  ನಮ್ಮ ಆಫೀಸಿನವರ ಸಹಾಯದಿಂದ ಒಂದು ಆಸ್ಪತ್ರೆಯಲ್ಲಿ ನಾರ್ಮಲ್ ಬೆಡ್ ವ್ಯವಸ್ಥೆ ಇದೆಯೆಂದು ಖಚಿತಪಡಿಸಿದರು. ICU ವ್ಯವಸ್ಥೆ ಸದ್ಯದಲ್ಲಿ ಇಲ್ಲ, ವೆಂಟಿಲೇಟರ್ ಸಹ ಇಲ್ಲ, ನಾರ್ಮಲ್ oxygen ನಲ್ಲಿ ಇರುವ ಹಾಗಿದ್ದರೆ ಬನ್ನಿ ಎಂದು ಹೇಳಿದರು. ನಾವು ಚಿ.ಬ.ಪುರ ದ ಡಾಕ್ಟರ್ ಅನ್ನು ಸಂಪರ್ಕಿಸಿದಾಗ..ಸದ್ಯಕ್ಕೆ ಪರವಾಗಿಲ್ಲ ICU ಬೇಕಾಗುವುದಿಲ್ಲ ಎಂದು ಹೇಳಿದರು. ಸರಿ ಅಲ್ಲಿಂದ ಆಂಬುಲೆನ್ಸ್ ನಲ್ಲಿ ಒಬ್ಬರನ್ನೇ ಇಲ್ಲಿಗೆ ಕರೆಸಿಕೊಂಡೆವು.‌ ನಾವು ಮಾತಾಡಿದ ಆಸ್ಪತ್ರೆ ರಾಜಾಜಿನಗರದಲ್ಲಿತ್ತು. ಅಲ್ಲಿಗೆ ನಾವು ತಲುಪುವಷ್ಟರಲ್ಲಿ ಆಂಬುಲೆನ್ಸ್ ಬಂದಾಗಿತ್ತು. ನಾನು ಒಳಗೆ ಹೋಗಿ.. Patient ಬಂದಿದ್ದಾರೆ ambulance ಅಲ್ಲಿ ಇದ್ದಾರೆ.. ಬೇಗ admit ಮಾಡಿಕೊಳ್ಳಿ ಅಂದೆ.. ಅವರು patient condition ಹೇಗಿದೆ ಅಂದ್ರು.. ಸ್ವಲ್ಪ ಸುಸ್ತಾಗಿದ್ದಾರೆ.. Pls ಬೇಗ admit ಮಾಡಿಕೊಳ್ಳಿ ಅಂದೆ.. ನಾವು ಒಂದು ಸಲ ನೋಡಬೇಕು ಅಂತ ambulance ಹತ್ತಿರ ಬಂದ್ರು. ಒಬ್ಬರು ppe kit ಹಾಕಿರುವವರು ಒಳಗೆ ಹತ್ತಿ ನಮ್ಮಮ್ಮನ ಮಾತಾಡಿಸಲು ಯತ್ನಿಸಿದರು.. ನಮ್ಮ ಅಮ್ಮ ಮಾತಾಡಲಿಲ್ಲ.. ಕೈಯಿಂದ ವೈರುಗಳನ್ನು ಹಿಡಿಯಲು ಪ್ರಯತ್ನಿಸ್ತಾ ಇದ್ದರು.. ನಾವು ಕೂಗಿದರೂ ಮಾತಾಡಲಿಲ್ಲ. ಆ ambulance driver ಗೆ ಒಂದು admission letter ಬರೆದು ಕಳಿಸಿದ್ರು ಚಿ.ಬ.ಪುರದ doctor. ಅದರಲ್ಲಿ ICU care ಬೇಕು, ventilator ಬೇಕು ಅಂತ ಬರೆದಿದ್ದರು!! (ಮೊದಲ ಮೋಸ!) ಇಲ್ಲಿ ICU bed ಇಲ್ಲ ಅಂತ ಹೇಳಲಿಲ್ಲವಾ ಮೇಡಂ ಬೇರೆ ಕಡೆ ಕರ್ಕೊಂಡು ಹೋಗಿ.. ಇಲ್ಲಿ ಆಗಲ್ಲ.. Condition critical ಆಗಿದೆ ಅಂದುಬಿಟ್ಟರು.. ನಮಗೆ ಏನೂ ತೋಚಲಿಲ್ಲ.. ಎಷ್ಟೇ Request ಮಾಡಿಕೊಂಡರೂ care ಮಾಡದೆ ಹೊರಟುಹೋದರು.. ಅಷ್ಟರಲ್ಲಿ ಮತ್ತೆ insurance office ನವರಿಗೆ phone ಮಾಡಿ ತರಾಟೆಗೆ ತೆಗೆದುಕೊಂಡೆ.. ಅವರು ventilator bed ಇಲ್ಲ ಅಂತ ಮೊದಲೇ ಹೇಳಿದ್ವಲ್ಲ.. ಬೇರೆ ಕಡೆ ಹುಡುಕಿ ಹೇಳ್ತೀನಿ ಇರಿ ಅಂದ್ರು. ಅಷ್ಟರಲ್ಲಿ ಅಲ್ಲಿದ್ದ ಒಬ್ಬ assistant ನಮ್ಮ ಮನೆಗೆ ಹತ್ತಿರ ಇರುವ ಒಂದು ಆಸ್ಪತ್ರೆಗೆ phone ಮಾಡಿ.. ಅಲ್ಲಿ ICU bed ಖಾಲಿ ಇದೆ.. ಅಲ್ಲಿಗೆ ಬೇಕಿದ್ರೆ ಹೋಗಿ ಅಂದ (ಇದೂ ಒಂದು ರೀತಿಯ business ಇರಬಹುದು. ಆ ಕ್ಷಣ ತಿಳಿಯಲಿಲ್ಲ. ಎರಡನೇ ಮೋಸ!) ನಾವು ಸುಮ್ಮನೆ time waste ಮಾಡೋದು ಬೇಡ ಅಂತ immediate phone ಮಾಡಿ confirm ಮಾಡಿಕೊಂಡು ಅಲ್ಲಿಗೆ shift ಮಾಡಲು ambulance ಗೆ ಹೇಳಿದೆವು. ಆ ಆಸ್ಪತ್ರೆಯ ಹೆಸರು "ಶ್ರೀ ಕೃಷ್ಣ" ಅಂತ.. ಕೃಷ್ಣನಲ್ಲಿ ಐಕ್ಯವಾಗಲು ಕಾಲನ ಕರೆಯಿತ್ತೇನೋ.. ಆಗ ಗೊತ್ತಿರಲಿಲ್ಲ. ಅಲ್ಲಿಗೆ ನಾವು ಹೋಗಿ ತಲುಪುವಷ್ಟರಲ್ಲಿ ambulance reach ಆಗಿ ನಮ್ಮ ಅಮ್ಮನನ್ನು admit ಮಾಡಿಕೊಂಡಿದ್ದರು.

ಅದೊಂದು ಚಿಕ್ಕ ಆಸ್ಪತ್ರೆ. ಅಲ್ಲಿನ duty ಡಾಕ್ಟರ್.. ಸಣ್ಣ ಹುಡುಗಿಯಂತೆ ಇದ್ದಳು (ನಾನು ಮೊದಲು ನರ್ಸ್ ಇರಬಹುದು ಅಂದುಕೊಂಡಿದ್ದೆ!) ನಾವು admission procedure ಮಾಡಿಸಿ, doctor ನ meet ಮಾಡಿದೆವು. ಅವರು patient history ತೆಗೆದುಕೊಂಡು risk form ಗೆ ಸಹಿ ಹಾಕಿಸಿಕೊಂಡರು. ನಮ್ಮ ಪ್ರಯತ್ನ ನಾವು ಮಾಡ್ತೀವಿ.. ಜಾಸ್ತಿ Age ಆಗಿರೋದ್ರಿಂದ ಏನೂ guarantee ಕೊಡಕ್ಕೆ ಆಗಲ್ಲ ಎಂದರು. ಆ ಸದ್ಯಕ್ಕೆ ನಮಗೂ ಯಾವ ಭರವಸೆಯೂ ಇರಲಿಲ್ಲ. ದೇವರ ಮೇಲೆ ಭಾರ ಹಾಕಿ ಹೊರಬಂದೆವು. ಅಷ್ಟರಲ್ಲಿ.. ಆಸ್ಪತ್ರೆಯ pharmacy ವಿಭಾಗದಿಂದ ಒಬ್ಬ ಹುಡುಗ bill pay ಮಾಡಿ ಅಂತ ಕರೆದ.. Admit ಮಾಡಿಸಿ ಕೇವಲ ಒಂದು ಗಂಟೆಯಾಗಿತ್ತು.. ಆಗಲೇ 16k bill ಆಗಿತ್ತು!!(ಮೂರನೇ ಮೋಸ!!) ಕೇವಲ 3 ppe kit ಗೆ 3200 ರಂತೆ.. 10 ಸಾವಿರ ಹಾಕಿದ್ದರು!!.. ಅಲ್ಲಿನ doctor ಹಾಗೂ ನರ್ಸ್ ಗಳು plastic ಚೀಲವನ್ನು ppe kit ಆಕಾರದಲ್ಲಿ ಕತ್ತರಿಸಿ ಧರಿಸಿಕೊಂಡು ಓಡಾಡುತ್ತಿದ್ದರು!! (ನಾಲ್ಕನೇ ಮೋಸ!). ICU with Ventilator charges 45k per day ಅಂತ admission time ನಲ್ಲಿ ಹೇಳಿದ್ದರು..‌ ಸರಿ ಹೇಗೂ insurance coverage ಇದೆ.. ನೋಡೋಣ ಬಿಡು.. ಸ್ವಲ್ಪ ಜ್ಞಾನ ಬಂದಮೇಲೆ ಬೇರೆ hospital ಗೆ shift ಮಾಡೋಣ ಅಂದುಕೊಂಡು ಮನೆಗೆ ಹೊರಟೆವು. ದಿನಾ ಟಿ.ವಿ ಯಲ್ಲಿ ನೋಡುತ್ತಿದ್ದಂತಹ ಪರಿಸ್ಥಿತಿ ನಮಗೂ ಬಂದಿತ್ತು. ನಾವು ಅಸಹಾಯಕರಾಗಿದ್ದೆವು.


ದಿನ 3 (26/09/2020, ಶನಿವಾರ)


ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಯಿಂದ ಕರೆ ಬಂತು (ಢವ ಢವ)... ಮೇಡಮ್ ಸ್ಚಲ್ಪ ಗಂಜಿ ತಂದುಕೊಡ್ತೀರಾ.. ಅವರಿಗೆ ಕೊಡಬೇಕು ಎಂದರು. ಕಂಡೀಷನ್ ಹೇಗಿದೆ ಎಂದು ಕೇಳಿದೆ.. Sugar ಸ್ವಲ್ಪ ಜಾಸ್ತಿ ಇದೆ.. Blood test ಗೆ ಕೊಡ್ತೀವಿ, rtpcr (swab test) ಗೂ ಕೊಟ್ಟಿದ್ದೀವಿ, chest x ray ಮಾಡಿಸ್ತೀವಿ. ಮದ್ಯಾಹ್ನದ ಮೇಲೆ report ಬರುತ್ತೆ, ಬನ್ನಿ. ಈಗ rice tube ನಲ್ಲಿ ಗಂಜಿ ಕೊಡ್ತೀವಿ ಬೇಗ ಕಳಿಸಿ ಅಂದ್ರು. ಸರಿ, ನಮ್ಮ ಅಕ್ಕನಿಗೆ phone ಮಾಡಿ, ಈಗ ನಾನು ಕೊಡ್ತೀನಿ, ಮದ್ಯಾಹ್ನ ನೀನು ಕಳಿಸು, ಸಂಜೆ ನಾವು ಮತ್ತೆ ತಗೊಂಡು ಹೋಗ್ತೀವಿ, test report ಬಗ್ಗೆ ವಿಚಾರಿಸಿಕೊಂಡು ಬರ್ತೀವಿ ಅಂದೆ. ನಾವು ಗಂಜಿ ತೆಗೆದುಕೊಂಡು ಹೋದೆವು. ಅಷ್ಟರಲ್ಲಿ chest x ray report ಬಂದಿತ್ತು. ಅದರಲ್ಲಿ ಒಂದು ಭಾಗ ಶೇ.50 ರಷ್ಟು infection ಆಗಿತ್ತು. ಇನ್ನೊಂದು ಬಾಗ ಶೇ. 20 ರಷ್ಟು ಆಗಿತ್ತು. Oxygen saturation 55% ಇತ್ತು without oxygen.. Kidney ಸಹ effect ಆಗಿತ್ತು. ಒಟ್ಟಿನಲ್ಲಿ critical condition ಅಂದ್ರು. ಅವರು ಕಣ್ಣು ಬಿಡ್ತಾ ಇಲ್ಲಾ.. Respond ಮಾಡ್ತಾ ಇಲ್ಲ.. Brain ಅಲ್ಲಿ clots ಏನಾದ್ರೂ ಆಗಿರಬಹುದು.. Corona negative ಬರೋವರೆಗೂ.. Scanning ಗೆ ಕರ್ಕೊಂಡು ಹೋಗಕ್ಕೆ ಆಗಲ್ಲ ಅಂದ್ರು. ಒಂದು ಸಲ video call ಮಾಡಬಹುದಾ ಅಂತ ಕೇಳಿ ಕಾಲ್ ಮಾಡಿಸಿದ್ವಿ.."ಅಮ್ಮಾ ಅಮ್ಮ" ಅಂತ ಎಷ್ಟು ಕೂಗಿದರೂ.. ಅವರಿಗೆ ಗಮನವಿಲ್ಲ.. ತಟ್ಟಿದರೂ ಗಿಂಡಿದರೂ response ಇಲ್ಲ ಎಂದರು.. ಎಲ್ಲಾ ಕಡೆ pipe ಗಳು ಹಾಕಿ.. ಎಲ್ಲಾ ತರಹದ injections ಒಟ್ಟಿಗೆ ಕೊಟ್ಟರೆ.. ಇರೋ ಅರೆಬರೆ ಜೀವಾನೂ ಹೊರಟುಹೋಗುತ್ತೆ.. ಇದು ನರಕವಲ್ಲದೇ ಮತ್ತೇನು.. ಅಷ್ಟರಲ್ಲಿ pharmacy ಯವ ಬಂದ.. 34k ಬಿಲ್ಲಾಗಿದೆ ಅಂದ! ನೀವು ಇಷ್ಟ ಬಂದ ಹಾಗೆ ಬಿಲ್ ಹಾಕಿದ್ರೆ ಕೊಡಲ್ಲ.. ಕಡಿಮೆ ಮಾಡಿ ಅಂತ ಗಲಾಟೆ ಮಾಡಿದೆವು. ಇವತ್ತು ಬಿಲ್ ಕೊಡಲ್ಲ ನಾಳೆ ಕೊಡ್ತೀವಿ ಅಂತ ಹೇಳಿ ಹೊರಬಂದೆವು.


ದಿನ 4(27/09/2020, ಭಾನುವಾರ)


ಬೆಳಿಗ್ಗೆ 9 ಗಂಟೆಗೆ ಗಂಜಿ ಕೊಡಲು ನಮ್ಮಕ್ಕನ ಮಗ ಹೋಗಿದ್ದ. ಅಜ್ಜಿ ಹೇಗಿದ್ದಾರೆ ಅಂತ ವಿಚಾರಿಸಿದ್ದಾನೆ. ಅಲ್ಲಿ ಇನ್ನೊಬ್ಬ ಡಾಕ್ಟರ್ ಬಂದಿದ್ದರಂತೆ. ಅವರು ಗಿರಿಜಾ ಕೃಷ್ಣ patient ಕಡೆಯವರಾ ನೀವು ಅಂತ ಕೇಳಿ ಕರೆದರಂತೆ. ನೋಡಿ ಅವರ condition ಹಾಗೆ ಇದೆ.. Respond ಮಾಡ್ತಿಲ್ಲ.. ಇನ್ನು ಸ್ವಲ್ಪ oxygen drop ಆದ್ರೆ ventilator ಬೇಕಾಗುತ್ತೆ ಅಂದರಂತೆ! (ಐದನೆಯ ಮೋಸ!). ಆದರೂ ವಯಸ್ಸಾಗಿರೋದರಿಂದ ತಡೆದುಕೊಳ್ಳೋದು ಕಷ್ಟ ಅಂದರಂತೆ.. ನಮಗೆ ಶಾಕ್!! ಯಾಕೆಂದರೆ.. ಮೊದಲ ದಿನವೇ Ventilator ಬೇಕಾಗುತ್ತೆ.. 45k ದಿನಕ್ಕೆ ಅಂತ ಹೇಳಿದವರು.. ಇದುವರೆಗೂ ಬರೀ normal liquid oxygen through pipe ಕೊಟ್ಟಿದ್ದಾರೆ.. ಅಷ್ಟೆ! ಅವನು ಮನೆಗೆ ಬಂದ ತಕ್ಷಣ ನನಗೆ phone ಮಾಡಿ "ಅಮ್ಮೀ ಏನೋ ಮೋಸ ಮಾಡ್ತಿದ್ದಾರೆ ಅನ್ನಿಸುತ್ತೆ, ಸರಿಯಾಗಿ phone ಮಾಡಿ ವಿಚಾರಿಸು.. ಇಲ್ಲಾ ಅಂದ್ರೆ ventilator charges ಹಾಕಿಬಿಡ್ತಾರೆ ಬಿಲ್ಲಿ ನಲ್ಲಿ" ಅಂದ. ನಾನು ಗಾಬರಿಯಾಗಿ ಮತ್ತೆ ಆ doctor ಗೆ phone ಮಾಡಿದೆ. ಯಾವುದಕ್ಕೂ ಇರಲಿ ಅಂತ record ಮಾಡಿಕೊಂಡೆ! ಪದೇ ಪದೇ ventilator ಹಾಕಿಲ್ವಾ.. ಬೇಕಾಗುತ್ತಾ ಅಂತ ಕೇಳಿ confirm ಮಾಡಿಕೊಂಡೆ.. Covid report ಇನ್ನೂ ಬಂದಿರಲಿಲ್ಲ..‌ಅದೇನಾದರೂ negative ಬರುತ್ತೇನೋ ಅನ್ನೋ ಆಸೆಯಿಂದ.. ಅದರ report ಗೆ follow up ಮಾಡಕ್ಕೆ ಶುರುಮಾಡಿದೆ. ಅದು ಮಧ್ಯಾಹ್ನದ ಹೊತ್ತಿಗೆ report ಬಂತು. Positive ಅಂತಾನೆ ಇತ್ತು. ಮತ್ತೆ blood test ನಲ್ಲಿ creatinine ಜಾಸ್ತಿ ಆಗಿತ್ತು. ಸಂಜೆಗೆ doctor ಸಿಗ್ತಾರಾ ಬರ್ತೀವಿ ಅಂತ phone ಮಾಡಿದೆ. ಅವರು late ಆಗಿ ಬರ್ತಾರೆ.. 6 ಗಂಟೆ ಮೇಲೆ ಬನ್ನಿ ಅಂದರು. ಸಂಜೆ ಹೋದಾಗ doctor ಬಂದಿರಲಿಲ್ಲ, ನಾಳೆ ಬೆಳಿಗ್ಗೆ ಬನ್ನಿ ಸಿಗ್ತಾರೆ ಅಂದರು. ಒಂದೇ ಒಂದು ಸಲ ಹತ್ತಿರ ಹೋಗಿ ನೋಡಬಹುದಾ ಎಂದೆ. "ಇಲ್ಲ ಮೇಡಮ್, ನಾವು ಮತ್ತೆ ನಿಮ್ಮನ್ನು patient ಆಗಿ ನೋಡಕ್ಕೆ ಇಷ್ಟ ಪಡಲ್ಲ.. Risk ಬೇಡ" ಅಂದರು. ಮತ್ತೆ ವಿಡಿಯೋ ಕಾಲ್ ಮಾಡಿಸಿದೆ. "ಅಮ್ಮ ಅಮ್ಮಾ.. ಗಂಜಿ ತಂದಿದ್ದೀನಿ.. ಕುಡಿಯಾಮ್ಮಾ" ಎಂದು ಕೂಗಿದೆ. ಕಣ್ಣೇ ಬಿಡಲಿಲ್ಲ.. Food intake ಎಲ್ಲಾ ಚೆನ್ನಾಗಿದೆ.. ಆದರೆ response ಇಲ್ಲ ಎಂದಳು nurse. ನಾವು ಬೇರೆ ಎಲ್ಲಿಗಾದ್ರೂ shift ಮಾಡಿಸಬಹುದಾ ಅಂತ ಯೋಚಿಸಕ್ಕೆ ಶುರು ಮಾಡಿದೆವು. BBMP bed ಇರೋ ಆಸ್ಪತ್ರೆ ಆದರೆ ದುಡ್ಡು ಕಡಿಮೆ ಆಗುತ್ತೆ ಅನ್ನೋ suggestion ಬಂತು. ಅದಕ್ಕೆ ಒಂದು BU ನಂಬರ್ ಬೇಕು ಅಂದರು. ಸರಿ ಅದನ್ನು ನಮ್ಮ ಭಾವನಿಗೆ ತಿಳಿಸಿದಾಗ, ಅವರು ಕೂಡಲೇ ಚಿ.ಬ.ಪುರ ಡಿ.ಸಿ ಕಡೆಯಿಂದ ಅದನ್ನು ತರಿಸಲು ವ್ಯವಸ್ಥೆ ಮಾಡಿದರು. 



ದಿನ 5(28/09/2020, ಸೋಮವಾರ) ಕರಾಳ ದಿನ!


ಹಿಂದಿನ ದಿನ ಯಾವುದೇ ರೀತಿಯ ಬದಲಾವಣೆ ಇಲ್ಲದ್ದರಿಂದ.. ಇದೇ ರೀತಿ ಇನ್ನೂ ಸ್ವಲ್ಪ ದಿನ ಕಳೆಯಬಹುದೆಂದು ಸ್ವಲ್ಪ ನಿರಾತಂಕದಲ್ಲಿದ್ದೆವು. ಬೆಳಿಗ್ಗೆ ನಮ್ಮಕ್ಕನ ಮಗ ಎರಡು ಹೊತ್ತಿಗಾಗುವಷ್ಟು ಗಂಜಿ ಕೊಟ್ಟು ಬಂದಿದ್ದ. ನಾನು ಆಫೀಸು ಕೆಲಸದಲ್ಲಿ ಮಗ್ನಳಾಗಿದ್ದೆ. ಬೆ. 11 ಗಂಟೆಗೆ ಡಾಕ್ಟರ್ ಬಂದಿರ್ತಾರೆ ಒಮ್ಮೆ condition ವಿಚಾರಿಸೋಣ ಅಂತ phone ಮಾಡಿದೆ. ಆಗ.. "ನೀವು ಇಲ್ಲಿಗೆ ಬನ್ನಿ, ಮಾತಾಡೋಣ" ಅಂದರು.‌ ಎಷ್ಟು ಕೇಳಿದರೂ phone ನಲ್ಲಿ ಹೇಳಕ್ಕೆ ಆಗಲ್ಲ ಇಲ್ಲಿಗೇ ಬನ್ನಿ ಎಂದರು.(ನನಗೆ ಕೈಕಾಲುಗಳಲ್ಲಿ ನಡುಕ ಶುರುವಾಯ್ತು..)ನಾನು ಕೂಡಲೇ manager ಗೆ ತಿಳಿಸಿ, ನಮ್ಮ ಅಕ್ಕ ಹಾಗೂ ಅವಳ ಮಗನ ಜೊತೆ ಆಸ್ಪತ್ರೆಗೆ ಓಡಿದೆ. ಅವರು ಹೇಳಿದ ವಿವರಣೆ ಹೀಗಿತ್ತು.. "ನಾವು ಕೊಡ್ತಾ ಇರೋ treatment ಗೆ ಅವರು respond ಮಾಡ್ತಿಲ್ಲ.. Condition is becoming worst.. Kidney function ಕಡಿಮೆ ಆಗಿದೆ.. ಎಲ್ಲಾ infections ಹಾಗೆ ಇದೆ.. ಯಾವುದೂ ಕಡಿಮೆ ಆಗ್ತಿಲ್ಲ.. ಅವರು recover ಆಗೋ chance ತೀರಾ ಕಡಿಮೆ.‌ ಈಗ ventilator ಗೆ shift ಮಾಡಕ್ಕೆ ಆಗಲ್ಲ.. ಮಾಡಿದರೂ ಅವರು ತಡ್ಕೊಳಲ್ಲ.. It will just keep on postponing her condition.. Immediate dialysis ಬೇಕಾಗುತ್ತೆ.. ಅದನ್ನು ಅವರು ತಡ್ಕೊಳಕ್ಕೆ ಆಗಲ್ಲ. ಬೆಳಿಗ್ಗೆ ಅವರ rice tube ಹೊರಗೆ ಬಂದುಬಿಟ್ಟಿತ್ತು.. ಈಗ ಮತ್ತೆ ಹೊಸಾದು ಹಾಕಿದ್ದೀವಿ.. She will be suffering more. Let us know whether to continue the treatment or stop it"........ ನಿಶ್ಯಬ್ದ.. ಮಾತಾಡಲು ಆಗುತ್ತಿಲ್ಲ.. ಅಳು ಉಕ್ಕಿ ಬರುತ್ತಿದೆ.. ಎಷ್ಟೇ ಆಗಲಿ ಅಮ್ಮಾ.. ಕಣ್ಣ ಮುಂದೆಯೇ ನಿರ್ದಾಕ್ಷಿಣ್ಯವಾಗಿ ಸಾಯಲು ಬಿಡಲಾಗುತ್ತದೆಯೆ?? ಆದರೆ ಅವರ ಪರಿಸ್ಥಿತಿಯಲ್ಲಿ ಬದಲಾವಣೆಯೇನೂ ಇಲ್ಲ… ಕೋಮಾ ಸ್ಟೇಜ್ ಗೆ ಹೋಗಿದ್ದ ನಮ್ಮ ಅತ್ತೆಯನ್ನು ಮೂರು ತಿಂಗಳು nurse care ಕೊಟ್ಟು ನೋಡಿಕೊಂಡಿದ್ದು ಜ್ಞಾಪಕ ಬಂತು.. ಅವರಿಗೂ ಹಿಂಸೆ ನಮಗೂ ಹಿಂಸೆ.. ಅದೂ ಒಂದು ರೀತಿಯ ನರಕ! ಡಾಕ್ಟರ್ ನಮ್ಮ ಅಳುಮುಖವನ್ನು ನೋಡಿ.. ನಿಮ್ಮ ನೋವು ಅರ್ಥ ಆಗುತ್ತೆ.. ಸ್ವಲ್ಪ time ತಗೊಂಡು ಹೇಳಿ ಎಂದರು. ನಾವು ಮೂವರೂ ಹೊರಗೆ ಬಂದು ಕಾರಿನಲ್ಲಿ ಕುಳಿತುಕೊಂಡೆವು.. ಯಾರು decide ಮಾಡೋದು? ಹೇಗೆ decide ಮಾಡೋದು..‌ ಎಲ್ಲಾ ನಿಲ್ಲಿಸಿಬಿಡಿ ಅಂತ ಸಹಿ ಹಾಕಿ ಕೊಟ್ಟರೆ ಮಾನವೀಯತೆಗೆ ಬೆಲೆ ಎಲ್ಲಿದೆ? ಎಂತಹ ಇಕ್ಕಟ್ಟಿನ ಪರಿಸ್ಥಿತಿ!! ಓ ದೇವರೇ ನಮ್ಮನ್ನು ಯಾಕೆ ಹೀಗೆ ಪರೀಕ್ಷೆ ಮಾಡ್ತಾ ಇದ್ದೀಯಾ?? ಇದ್ದು ಇದ್ದು ಇಂತಹ ಪರಿಸ್ಥಿತಿಗೆ ತಳ್ಳಿಬಿಟ್ಟೆಯಲ್ಲಾ?? ಅತ್ತ ಕಡೆ ಮಗ ಆಸ್ಪತ್ರೆಯಲ್ಲಿದ್ದಾನೆ.. ಸೊಸೆ ಮತ್ತು ಮೊಮ್ಮಕ್ಕಳಿಗೂ infection ಆಗಿ quarantine ನಲ್ಲಿದ್ದಾರೆ.. ಒಬ್ಬೊಬ್ಬರು ಒಂದೊಂದು ಕಡೆ.. ಇಲ್ಲಿ ನೋಡಿದರೆ decide ಮಾಡಿ ಹೇಳಿ ಅಂತಿದ್ದಾರೆ.. ಯಾರಿಗೂ ಬೇಡಪ್ಪಾ ಈ ಪರಿಸ್ಥಿತಿ..‌ನಮಗೆ ಅಳುವುದು ಬಿಟ್ಟರೆ ಬೇರೇನೂ ತೋಚುತ್ತಿಲ್ಲ..‌ ಒಂದೇ ಒಂದು ಬಾರಿ ಒಳಗೆ ಬಿಡಿ, ಮಾತಾಡ್ತೀವಿ ಅಂತ ಕೇಳಿಕೊಂಡರೂ ಒಳಗೆ ಬಿಡಲಿಲ್ಲ.. ಹೋಗಲಿ ಮೊಮ್ಮಕ್ಕಳೆಂದರೆ ನಮ್ಮಮ್ಮನಿಗೆ ಪ್ರಾಣ ಅವರ ಹತ್ತಿರ ಮಾತಾಡಿಸಿ ನೋಡೋಣ ಕಣ್ಣು ಬಿಡ್ತಾರೇನೋ ಅಂತ ಕಡೆಯ ಪ್ರಯತ್ನವೆಂಬಂತೆ.. Conference call ನಲ್ಲಿ ನನ್ನ ಮಗಳು ಹಾಗೂ ಅಕ್ಕನ ಮಗಳನ್ನು ಸೇರಿಸಿ call ಮಾಡಿದೆವು. ಇಬ್ಬರೂ "ಅಜ್ಜೀ, ಅಜ್ಜೀ" ಎಂದು ಕೂಗಿದರು. ಏನೂ ಪ್ರಯೋಜನವಿಲ್ಲ.. ಬೀಪ್ ಬೀಪ್ ಎನ್ನುವ ಶಬ್ದ ಮಾತ್ರ ಕೇಳಿಸುತ್ತಿತ್ತು.. ಆಗ ಊಟದ ಸಮಯ ಆಗಿತ್ತು.. ನಾವು ಮನೆಗೆ ಹೋಗಿ ಮತ್ತೆ ಬರ್ತೀವಿ ಅಂತ receptionist ಗೆ ತಿಳಿಸಿ ಮನೆಗೆ ಹೊರಟೆವು. 5 ನಿಮಿಷ ಆಗಿತ್ತು ನಾವು ಹೊರಟು.. ಹಿಂದಯೇ ಮತ್ತೆ ಆಸ್ಪತ್ರೆಯಿಂದ ಕರೆ ಬಂತು.. ತಕ್ಷಣ ಬನ್ನಿ ಅಂತ.. ನಾವು ಮನೆಯ ಹತ್ತಿರದ ತಿರುವಿನಲ್ಲಿ ಇದ್ದೆವು.. ಮತ್ತೆ ವಾಪಸ್ ಆಸ್ಪತ್ರೆಗೆ ಬಂದೆವು… ಡಾಕ್ಟರ್ ನಮ್ಮನ್ನು ಕಂಡ ಕೂಡಲೇ.. "ಯಾಕೆ ಏನೂ ಹೇಳದೆ ಹೊರಟು ಹೋದ್ರಿ? ಇಲ್ಲೇ ಇರ್ತೀರ ಅಂದುಕೊಂಡಿದ್ದೆ" ಅಂದರು.. "ನಮಗೆ ಏನೂ decision ತಗೊಳಕ್ಕೆ ಆಗಲಿಲ್ಲ.. ನಮ್ಮ ಮನೆ ಇಲ್ಲೇ ಹತ್ತಿರಾನೇ ಇದೆ.. ಅದಕ್ಕೆ ಹೋಗಿ ಬರೋಣ ಅಂತ ಹೊರಟಿದ್ವಿ.. ಏನಾಯ್ತು ಮೇಡಮ್??" ಅಂದೆ. "ಈಗ ಸ್ವಲ್ಪ ಹೊತ್ತಿನ ಮುಂಚೆ ನಿಮ್ಮ ತಾಯಿಯ pulse down ಆಯ್ತು.. Revoke ಮಾಡಕ್ಕೆ try ಮಾಡಿದ್ವಿ ಆಗಲಿಲ್ಲ.. She is no more".... ಒಂದು ಕ್ಷಣ ನಿಶ್ಯಬ್ದ.. "ಮೇಡಮ್ ಸರಿಯಾಗಿ ನೋಡಿ.. ಇನ್ನೂ ಪ್ರಾಣ ಇದೆಯೇನೋ.. ಇಷ್ಟಕ್ಕೆ ಮುಂಚೆ ವಿಡಿಯೋ ಕಾಲ್ ಮಾಡಿದ್ವಿ.. ಇನ್ನೊಂದ್ಸಲ Check ಮಾಡಿ.." ಅಂತ ಕೇಳಿಕೊಂಡೆ.. ಆಗ ಅಲ್ಲಿದ್ದ ನರ್ಸ್ ಹೇಳಿದ್ದು.. "ಅದೇ ಮೇಡಂ ವಿಡಿಯೋ ಕಾಲ್ ನಲ್ಲಿ ಒಂದು ಸಣ್ಣ ಮಗು ಅಜ್ಜೀ ಅಜ್ಜೀ ಅಂತಲ್ಲ.. ಅದಾದ ಮೇಲೇನೆ pulse down ಆಯ್ತು" ಅಂದಳು.. ಓ.. ಅದು ನನ್ನ ಮಗಳು!! ಇದೇನು ನಿಜವೋ ಕಾಕತಾಳೀಯವೋ.. ನಮ್ಮಮ್ಮನ ಪ್ರಾಣವೆಲ್ಲಾ ಅವಳಲ್ಲಿಯೇ ಇತ್ತು..‌ ದಿನಕ್ಕೆ ಮೂರು ಸಲ ವಿಚಾರಿಸುತ್ತಿದ್ದರು ಅವಳ ಬಗ್ಗೆ! ಅವಳು ಮಾತಾಡಿದ ನಂತರವೇ ಪ್ರಾಣ ಹೋಗಿದೆ! ನಮಗೆ ನಿರ್ಧಾರ ತೆಗೆದುಕೊಳ್ಳುವ ಕಷ್ಟವನ್ನೇ ಕೊಡಲಿಲ್ಲ ನಮ್ಮಮ್ಮ!! ಇನ್ನೇನು ಉಳಿದಿಲ್ಲ.. ನಮ್ಮ ಅಲ್ಲಿಯವರೆಗಿನ ಆತಂಕದ ಆಲೋಚನೆಗಳಿಗೆ ಒಮ್ಮೆಗೇ ತೆರೆ ಬಿದ್ದಿತ್ತು.. ಅಮ್ಮನನ್ನು ಕಡೆ ಬಾರಿ ನೋಡಿ ಬೀಳ್ಕೊಡುವುದಷ್ಟೇ ಉಳಿದದ್ದು ನಮ್ಮ ಪಾಲಿಗೆ… ಹತ್ತಿರ ಹೋಗುವಂತಿಲ್ಲ.. ಮುಟ್ಟುವಂತಿಲ್ಲ.. ಮನಬಿಚ್ಚಿ ಅಳುವಂತಿಲ್ಲ.. ಯಾರೂ ಬಂಧುಗಳು ಬರುವಂತಿಲ್ಲ.. ಇಷ್ಟು ವರ್ಷ ಬದುಕಿ ಬಾಳಿದ ನಮ್ಮ ಅಮ್ಮನಿಗೆ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನೂ ಮಾಡಲಾಗಲಿಲ್ಲ… ಈ ಸಾವು ನ್ಯಾಯವೇ???? ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ..


-ಪೂವಿಕೃ

05-Nov-2020

ಬೆಂಗಳೂರು.

Comments

Popular Posts